ದಾವಣಗೆರೆ: ಹಣ್ಣುಗಳ ರಾಜ ಮಾವು ಇಷ್ಟಪಡದವರಾರು?. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಮಾವಿನ ಹಣ್ಣಿನ ಅಭಿಮಾನಿಗಳೇ. ದಾವಣಗೆರೆಯ ಕೆ.ಆರ್.ಮಾರುಕಟ್ಟೆಗೆ ನಾನಾ ತಳಿಯ ಮಾವಿನ ಹಣ್ಣುಗಳು ಲಗ್ಗೆಇಟ್ಟಿವೆ. ದರ ನೂರರ ಗಡಿ ದಾಟಿದೆ. ಆದರೂ ಗ್ರಾಹಕರು ಮಾವು ಖರೀದಿಗೆ ಮುಗಿಬೀಳುತ್ತಿದ್ದಾರೆ.
ಬೆಣ್ಣನಗರಿಯ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಘಮಲು ಹೆಚ್ಚಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ಎತ್ತ ಕಣ್ಣಾಡಿಸಿದರೂ ಹಣ್ಣುಗಳ ರಾಜನ ದರ್ಶನವಾಗುತ್ತಿದೆ. ಮಲಗೋಬಾ, ರಸಪುರಿ, ತೋತಾಪುರಿ, ಸಿಂಧೂರ್, ಬೇನಿಷಾ, ಬಾದಾಮಿ, ಮಲ್ಲಿಕಾ, ಕಸಿ ಮತ್ತು ಮಲ್ಲಿಕಾ ಸೇರಿದಂತೆ ವಿವಿಧ ತಳಿಯ ಮಾನವಿ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
ಬಾದಾನಿ, ಮಲಗೋಬಾ, ಸಿಂಧೂರ್‌ಗೆ ಲೋಕಲ್ ತಳಿಗಳ ಠಕ್ಕರ್: ಸ್ಥಳೀಯ ತಳಿ ಕಸಿ ಹಣ್ಣುಗಳು ಆಂಧ್ರ ಪ್ರದೇಶ, ತಮಿಳುನಾಡಿನ ಬಾದಾನಿ, ಮಲಗೋಬಾ, ಸಿಂಧೂರ್ ಹಣ್ಣುಗಳಿಗೆ ಟಕ್ಕರ್ ಕೊಡುತ್ತಿವೆ. ಈ ಹಣ್ಣಿನ ಗಾತ್ರ ಚಿಕ್ಕದಾಗಿದ್ದರೂ ಸಕ್ಕರೆ, ಬೆಲ್ಲಕ್ಕಿಂತಲೂ ಸಿಹಿಯಾಗಿರುತ್ತದೆ. ಜೊತೆಗೆ ಕಡಿಮೆ ಬೆಲೆಗೂ ಸಿಗುವುದರಿಂದ ಗ್ರಾಹಕರು ಹೆಚ್ಚಾಗಿ ಕಸಿ ಹಣ್ಣನ್ನು ಖರೀದಿಸಲು ಮುಂದಾಗುತ್ತಿದ್ದಾರೆ.
ಮಾವು ಮಾರಾಟಗಾರ ಸೈಯ್ಯದ್ ವಲೀಪೀರ್ ಮಾತನಾಡಿ, "ಬಹುತೇಕ ಹಣ್ಣುಗಳು ಕೋಲಾರದ ಶ್ರೀನಿವಾಸಪುರ, ಆಂಧ್ರ ಪ್ರದೇಶ, ಚನ್ನಪಟ್ಟಣ ಮತ್ತು ದಾವಣಗೆರೆಯ ಸಂತೇಬೆನ್ನೂರಿನಿಂದ ಮಾರುಕಟ್ಟೆಗೆ ಬರುತ್ತಿವೆ. 15ರಿಂದ 20 ದಿನಗಳಲ್ಲಿ ಸ್ಥಳೀಯ ಮಾವು ಮಾರುಕಟ್ಟೆಯಲ್ಲಿ ಕಾಣಸಿಗುವುದಿಲ್ಲ. ಬಳಿಕ ಆಂಧ್ರ, ತಮಿಳುನಾಡಿನ ಖ್ಯಾತ ಮಾವಿನ ತಳಿಗಳಾದ ನೀಲಂ, ಬೇನಿಷಾ ಹಣ್ಣಿನ ಸುಗ್ಗಿ ಆರಂಭವಾಗಲಿದೆ. ಈ ಬಾರಿ ಮಾರುಕಟ್ಟೆಗೆ ಕೇವಲ 65%ರಷ್ಟು ಮಾವಿನ ಹಣ್ಣು ಮಾತ್ರ ಬಂದಿದೆ. ಕಸಿ ಹಣ್ಣು ಒಂದೂವರೆ ಕೆ.ಜಿ.ಗೆ 80ರಿಂದ 100 ರೂ, ಸಿಂಧೂರ್ ತಳಿಯ ಹಣ್ಣು ಒಂದೂವರೆ ಕೆ.ಜಿ.ಗೆ 100 ರೂ, ಮಲ್ಲಿಕಾ ತಳಿಯ ಹಣ್ಣು ಕೆ.ಜಿ ಗೆ 80 ರಿಂದ 100 ರೂ, ಬಾದಾಮಿ ಪ್ರತಿ ಕೆ.ಜಿಗೆ 100 ರಿಂದ 120 ರೂ, ತೋತಾಪುರಿ ಪ್ರತಿ ಕೆ.ಜಿ. ಗೆ 50 ರಿಂದ 60 ರೂ ದರ ನಿಗದಿ ಮಾಡಲಾಗಿದೆ. ನಮಗೆ ಪ್ರತಿ ಕೆ.ಜಿ ಗೆ ಐದಾರು ರೂಪಾಯಿ ಉಳಿಯುತ್ತೆ" ಎಂದು ತಿಳಿಸಿದರು.
ಗ್ರಾಹಕ ನಾರಾಯಣ ಸ್ವಾಮಿ ಮಾತನಾಡಿ, "ಈ ಬಾರಿ ಮಳೆ ಅಭಾವ ಆಗಿದ್ದರಿಂದ ಮಾವು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬಂದಿದೆ. ಅದರೂ ಬೆಲೆ ಕೂಡ ಸ್ವಲ್ಪ ಕಡಿಮೆ ಇದೆ. ಕಸಿ, ಸಿಂಧೂರ್, ಬಾದಾಮಿ, ತೋತಪುರಿ ತಳಿಯ ಹಣ್ಣು ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದೆ. ಚೆನ್ನೈನಿಂದ ಹಣ್ಣುಗಳು ಬಂದಿವೆ" ಎಂದು ಹೇಳಿದರು.
ಇದನ್ನೂ ಓದಿ: ಕ್ಯಾರೆಟ್, ಪಾಲಕ್, ಮಾವಿನ ಹಣ್ಣು, ಪಪ್ಪಾಯ ತಿನ್ನೋದರಿಂದ ಆಗುವ ಲಾಭಗಳೇನು? ಹೃದಯ ಆರೋಗ್ಯಕ್ಕೆ ಇವು ಬೇಕೇಬೇಕು!