ಬೆಳಗಾವಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ತಪ್ಪನ್ನು ಒಪ್ಪಿಕೊಳ್ಳಬೇಕು. ಹತ್ತು ಸುಳ್ಳು ಹೇಳುವುದಕ್ಕಿಂತ ಒಪ್ಪಿಕೊಂಡು ಬಿಟ್ಟರೆ ಅದು ಅಲ್ಲಿಗೇ ಮುಗಿಯುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜಕೀಯ ವಿಚಾರ ಅಂತಾ ಈಗಲೇ ಹೇಳಲು ಆಗಲ್ಲ. ಅದೇ ರೀತಿ, ಇಲ್ಲ ಅಂತಾನೂ ಹೇಳೇಕೆ ಆಗಲ್ಲ. ತನಿಖೆ ನಡೀತಿ ದೆ. ದಾಖಲೆ ನೋಡಿದ ಮೇಲೆ ಏನು ಅಂತಾ ಗೊತ್ತಾಗುತ್ತದೆ ಎಂದರು.
ನಾಗೇಂದ್ರ ವಿಚಾರದಲ್ಲಿ ಸರ್ಕಾರಕ್ಕೆ ಮುಜುಗರವಾಗಿದೆಯೇ ಎಂದ ಪ್ರಶ್ನೆಗೆ, ತಪ್ಪು ಮಾಡಿದ್ದರೆ ಖಂಡಿತಾ ಮುಜುಗರ ಆಗುತ್ತದೆ. ಮಂತ್ರಿಗಳು, ಶಾಸಕರು ಭಾಗಿಯಾಗಿದ್ದರೆ ಸರ್ಕಾರಕ್ಕೆ ಅದರಿಂದ ಕಳಂಕ ಎಂದು ಹೇಳಿದರು.
ಬಿಜೆಪಿ ಸಿಎಂ ರಾಜೀನಾಮೆಗೆ ಒತ್ತಾಯಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ಸಿಎಂಗೆ ಇದರಿಂದ ಏನೂ ಸಮಸ್ಯೆ ಇಲ್ಲ. ಕೆಳಗಿನವರು ಸಮಸ್ಯೆ ಮಾಡಿದರೆ ಅದು ಮುಖ್ಯಮಂತ್ರಿಗಳಿಗೆ ಸಂಬಂಧ ಇಲ್ಲ. ನಮ್ಮ ಇಲಾಖೆ ನಾವು ನೋಡಿಕೊಳ್ಳಬೇಕಾಗುತ್ತದೆ. ಅದಕ್ಕೆ ನಾವೇ ಜವಾಬ್ದಾರರು. ಹಾಗಾಗಿ, ಸಿಎಂಗೂ ಇದಕ್ಕೂ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಂಡರು.
ಮುಡಾ ಹಗರಣ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಮೈಸೂರು ಚಲೋ ವಿಚಾರಕ್ಕೆ, ಅದರಿಂದ ಏನೂ ಆಗುವುದಿಲ್ಲ. ಅಂಥ ಬಹಳಷ್ಟು ಕೇಸ್ಗಳಾಗಿವೆ. ಮುಡಾ ಹಾಗೂ ವಾಲ್ಮೀಕಿ ನಿಗಮ ಎರಡನ್ನೂ ಹೋಲಿಸಲು ಆಗಲ್ಲ. ಅವು ಬೇರೆ, ಬೇರೆ. ಲ್ಯಾಂಡ್ ಹೋಗಿದ್ದು, ಲ್ಯಾಂಡ್ ಬಂದಿದೆ. ನಾವು ಕೂಡಾ ಬುಡಾದಲ್ಲಿ ಆ ರೀತಿ ಕೊಟ್ಟಿದ್ದೇವೆ. ಆ ರೀತಿ ಬೇರೆ ಕಡೆಯೂ ಆಗಿದೆ. ಆದ್ದರಿಂದ ಮುಡಾವನ್ನು ರಾಜಕೀಯ ಅಂತಾ ಹೇಳಬಹುದು ಎಂದು ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಆಂತರಿಕ ಜಗಳದಿಂದ ಮುಡಾ ಹೊರ ಬಂತೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಹಗರಣ ಮಾಡಿದ್ದರೆ ಅದು ಯಾವಾಗಲಾದರೂ ಹೊರಗೆ ಬಂದೇ ಬರುತ್ತದೆ. ಕಾಂಗ್ರೆಸ್ ಒಳ ಜಗಳ, ಬೇರೆ ಜಗಳ ಅಂತಿಲ್ಲ ಎಂದು ಹೇಳಿದರು.