ರಾಯಚೂರು: ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಗರಣದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದು ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಹೇಳಿದ್ದಾರೆ.
ನಗರದಲ್ಲಿ ಇಂದು ಈ ಬಗ್ಗೆ ಮಾತನಾಡಿದ ಅವರು, ಎಸ್ಐಟಿ, ಸಿಬಿಐ ಮತ್ತು ಇಡಿ ಮೂರು ಸಂಸ್ಥೆಗಳು ಪ್ರಕರಣದ ತನಿಖೆ ನಡೆಸುತ್ತಿವೆ. ಮೂರು ಸಂಸ್ಥೆಗಳು ದಾಖಲೆಗಳ ಸಂಗ್ರಹ ಮಾಡುತ್ತಿದ್ದು, ತನಿಖೆ ತೀವ್ರಗತಿಯಲ್ಲಿ ಸಾಗಿದೆ. ಇದರಲ್ಲಿ ಯಾರೇ ತಪ್ಪಿತಸ್ಥರು ಇದ್ರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಜೂನ್ 26ರಂದು ಪ್ರಿನ್ಸಿಪಲ್ ಸೆಕ್ರೆಟರಿ ನೇತೃತ್ವದಲ್ಲಿ ಸಭೆ ಆಗಿದೆ. ನಿಮಗದ ಪ್ರಿನ್ಸಿಪಲ್ ಸೆಕ್ರೆಟರಿ ಮಂಜುನಾಥ ಹಾಗೂ ಎಲ್ಲಾ ಅಧಿಕಾರಿಗಳ ಜೊತೆಗೆ ಸಿಎಂ ಸಿದ್ದರಾಮಯ್ಯ ಕೂಡ ಸಭೆ ಮಾಡಿದ್ದಾರೆ. ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಲು ಸಭೆಯಲ್ಲಿ ಹೇಳಿದ್ದೇವೆ ಎಂದರು.
ನಿಗಮದಲ್ಲಿ 10 ವರ್ಷಗಳಿಂದ ನಡೆದ ಎಲ್ಲಾ ಹಣದ ವ್ಯವಹಾರದ ಮಾಹಿತಿ ಕೇಳಿದ್ದೇವೆ. ನಮ್ಮ ಅಧಿಕಾರಿಗಳು ಒಂದು ಬುಕ್ ಲೆಟ್ ರೂಪದಲ್ಲಿ ಸಿದ್ಧ ಪಡಿಸುತ್ತಿದ್ದಾರೆ. 10ವರ್ಷದಿಂದ ಇಲ್ಲಿಯವರೆಗೆ ನಿಗಮಗಳಿಗೆ ಎಷ್ಟು ಅನುದಾನ ಹೋಯ್ತು. ಯಾವ್ಯಾವ ಯೋಜನೆಗಳಿಗೆ ಹಣ ಖರ್ಚು ಆಯ್ತು, ಎಷ್ಟು ಉಳಿಕೆ ಆಯ್ತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾರೇ ತಪ್ಪಿತಸ್ಥರು ಇದ್ರೂ ಇದರಲ್ಲಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸಲೇಬೇಕು. ಇದರಲ್ಲಿ ಯಾರನ್ನ ಯಾರು ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ದದ್ದಲ್ ಹೇಳಿದ್ರು.
ಈ ಪ್ರಕರಣವನ್ನು ಮೂರು ಉನ್ನತ ಸಂಸ್ಥೆಗಳ ದಕ್ಷ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ನಮ್ಮ ಸಮಾಜಕ್ಕಾಗಿ ಬಂದ ಹಣ ಅದು. ನಾನು ಕೂಡ ಎಸ್ಟಿ ಮೀಸಲು ಕ್ಷೇತ್ರದಿಂದ ಆಯ್ಕೆ ಆಗಿದ್ದೇನೆ. ಹಗರಣದ ಬಗ್ಗೆ ಸಮಗ್ರ ತನಿಖೆ ಆಗುತ್ತೆ ಎಂಬ ಭರವಸೆ ಇದೆ. ಯಾರು ತಪ್ಪು ಮಾಡಿದ್ದಾರೆ, ಯಾರು ದುಡ್ಡು ಲೂಟಿ ಮಾಡಿದ್ದಾರೆ. ಅವರಿಂದ ದುಡ್ಡು ಮರಳಿ ನಿಗಮಕ್ಕೆ ತರಿಸುವ ಕೆಲಸ ನಡೆದಿದೆ ಎಂದು ತಿಳಿಸಿದರು.