ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪ ಕೇಳಿ ಬರುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪರಿಶಿಷ್ಠ ವರ್ಗಗಳ ಕಲಾಣ್ಯ ಇಲಾಖೆ ಮಾಜಿ ಸಚಿವ ಬಿ.ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗಿದೆ. ಹಗರಣ ಸಂಬಂಧ ಜುಲೈ 9ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೊಟೀಸ್ ಜಾರಿ ಮಾಡಿದೆ.
ಮಾಜಿ ಸಚಿವ ನಾಗೇಂದ್ರ ಜೊತೆ ವಾಲ್ಮೀಕಿ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ಅವರಿಗೂ ನೊಟೀಸ್ ಜಾರಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಅವ್ಯವಹಾರ ಹಗರಣದಲ್ಲಿ ಇಬ್ಬರಿಗೂ ಉರುಳಾಗುವ ಸಾಧ್ಯತೆಯಿದೆ.
ನಿಗಮದ 94.73 ಕೋಟಿ ಅವ್ಯವಹಾರ ಆರೋಪ ಸಂಬಂಧ ಇದುವರೆಗೂ 11 ಮಂದಿಯನ್ನು ಬಂಧಿಸಿ 30 ಕೋಟಿ ಅಧಿಕ ಹಣ ಜಪ್ತಿ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಆರಂಭದಲ್ಲಿ 18 ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂಬುದು ಕಂಡು ಬಂದಿತ್ತು. ತನಿಖೆ ಚುರುಕುಗೊಳಿಸುತ್ತಿದ್ದಂತೆ ಆರೋಪಿತರ ಕಂಪನಿಗಳ ಮೂಲಕ ನೂರಾರು ಬ್ಯಾಂಕ್ ಅಕೌಂಕ್ಗಳಿಗೆ ಕೋಟ್ಯಂತರ ಹಣ ವರ್ಗಾವಣೆಯಾಗಿತ್ತು. ದೊಡ್ಡ ಮಟ್ಟದಲ್ಲಿ ಅವ್ಯವಹಾರಗಳು ನಡೆದಿರುವಾಗ ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷರಾಗಿರುವ ಬಸವನಗೌಡ ದದ್ದಲ್ ಅವರ ಗಮನಕ್ಕೆ ಬಂದಿಲ್ಲವೇ? ಅವ್ಯವಹಾರ ಬೆಳಕಿಗೆ ಬಂದ ಮೇಲೆ ಕೈಗೊಂಡ ಕ್ರಮಗಳು ಬಗ್ಗೆ ಎಸ್ಐಟಿ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.