ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಶಾಮೀಲಾಗಿದ್ದಾರೆ. ಸಚಿವ ಬಿ.ನಾಗೇಂದ್ರ ಜೊತೆ ಮುಖ್ಯಮಂತ್ರಿ ಕೂಡ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಬಿ.ನಾಗೇಂದ್ರ ಈ ಪ್ರಕರಣದಲ್ಲಿ ಸಣ್ಣ ಆರೋಪಿ. ಇದರ ಹಿಂದೆ ದೊಡ್ಡ ಆರೋಪಿಗಳು ಇದ್ದಾರೆ. ಈ ಎಲ್ಲ ಸತ್ಯ ಹೊರಬರಲು ಪ್ರಕರಣವನ್ನು ಸಿಬಿಐಗೆ ನೀಡಬೇಕು. ಸಿಎಂ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಅಕ್ರಮದ ಹಣವನ್ನು ಸಚಿವರೊಬ್ಬರೇ ನುಂಗಿಲ್ಲ. ಇದರಲ್ಲಿ 'ಇಡೀ ಸಚಿವ ಸಂಪುಟ'ವೇ ಶಾಮೀಲಾಗಿದ್ದು, ಹಣ ಹೈದರಾಬಾದ್‌ಗೆ ಹೋಗಿ ನಂತರ ದೆಹಲಿಗೆ ತಲುಪಿದೆ. ನನ್ನ ಬುಡಕ್ಕೆ ಬಂದುಬಿಡುತ್ತದೆ ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಸಿಬಿಐ ತನಿಖೆ ಮಾಡಿಸಲು ಒಪ್ಪುತ್ತಿಲ್ಲ. ರಾಹುಲ್ ಗಾಂಧಿ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಇದಕ್ಕೆ ಉತ್ತರ ನೀಡಬೇಕು ಎಂದರು.
ಸಿದ್ದರಾಮಯ್ಯ ಕಣ್ಣಿನಡಿಯಲ್ಲೇ ಹಗರಣ: ಬಡವರಿಗೆ ಸೇರಬೇಕಾಗಿದ್ದ ಹಣ ಸಿದ್ದರಾಮಯ್ಯನವರ ಜೇಬಿಗೆ ಹೋಗಿದೆ. ಪರಿಶಿಷ್ಟ ಜಾತಿ, ಪಂಗಡದ ಹಣವನ್ನೂ ನುಂಗುತ್ತಾರೆ ಎನ್ನುವುದು ರಾಜ್ಯ ರಾಜಕೀಯದ ದುರಂತ. 14 ಬಾರಿ ಬಜೆಟ್ ಮಂಡಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಈಗ ಅವರ ಕಣ್ಣಿನಡಿಯಲ್ಲೇ ಹಗರಣ ನಡೆದಿದೆ. ಒಂದು ವರ್ಷ ಕಾಂಗ್ರೆಸ್ ಸರ್ಕಾರ ಲೂಟಿ ಗ್ಯಾರಂಟಿಯನ್ನು ನೀಡಿದೆ ಎಂದು ದೂರಿದರು.
ಲೂಟಿಕೋರರ ಪಾರ್ಟಿ ಕಾಂಗ್ರೆಸ್ ನುಡಿದಂತೆ ನಡೆಯುತ್ತೇವೆ ಎಂದು ಹಣ ಕೊಳ್ಳೆ ಹೊಡೆದಿದ್ದಾರೆ. ಯಾವುದೇ ಪ್ರಕರಣದಲ್ಲಿ ಒಂದೇ ಬಾರಿಗೆ ಎರಡು ಸಂಸ್ಥೆಯಿಂದ ತನಿಖೆ ನಡೆಸಲು ಸಾಧ್ಯವಿಲ್ಲ. ಆದರೆ, ಸಿಬಿಐ ಮಾಡಬೇಕಾದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದೆ. ಈ ಎಟಿಎಂ ಸರ್ಕಾರ 'ಟಕಾಟಕ್' ಎಂದು ಹಣ ವರ್ಗಾವಣೆ ಮಾಡಿಕೊಂಡಿದೆ. ಇನ್ನೂ ಯಾವ ನಿಗಮಗಳಲ್ಲಿ ಎಷ್ಟು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ?, ಎಷ್ಟು ಬೇನಾಮಿ ಖಾತೆಗಳಿಗೆ ಹಣ ಹೋಗಿದೆ ಎಂದು ಪತ್ತೆಯಾಗಬೇಕು. ಸಚಿವರ ಆಪ್ತ ಸಹಾಯಕ ಸಹ ಇದರಲ್ಲಿ ಶಾಮೀಲಾಗಿದ್ದಾನೆ ಎಂದರೆ ಸಚಿವರು ಕೂಡ ಶಾಮೀಲಾಗಿದ್ದಾರೆ ಎಂದರು.
ನಾಲ್ಕು ಹಂತದ ಹೋರಾಟ: ರಾಜ್ಯಪಾಲರಿಗೆ ಈ ಕುರಿತು ವಿವರ ನೀಡಿದ್ದೇವೆ. ಬಿಜೆಪಿ ನಾಲ್ಕು ಹಂತಗಳಲ್ಲಿ ಇದರ ವಿರುದ್ಧ ಹೋರಾಟ ಮಾಡಲಿದೆ. ಸಚಿವರು ಹಾಗೂ ಮುಖ್ಯಮಂತ್ರಿಯವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಈ ಸರ್ಕಾರವನ್ನು ವಜಾ ಮಾಡಬೇಕು ಎಂದು ಕೂಡ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಸಿಎಂ ಸಿದ್ದರಾಮಯ್ಯನವರಷ್ಟು ಭಂಡ ಯಾರೂ ಇಲ್ಲ. ಈ ಭ್ರಷ್ಟಾಚಾರಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ವಇಚ್ಛೆಯಿಂದ ರಾಜೀನಾಮೆ ಕೊಡುತ್ತಿದ್ದೇನೆ: ಬಿ ನಾಗೇಂದ್ರ