ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಜೆ.ಸಿ.ಮಾಧುಸ್ವಾಮಿ ಆಕಾಂಕ್ಷಿ ಎಂದಿರುವುದಕ್ಕೆ ನನ್ನ ವಿರೋಧವಿಲ್ಲ. ನಾನು ಹೈಕಮಾಂಡ್ ನಾಯಕರಲ್ಲಿ ರಾಜ್ಯಸಭೆ ಸದಸ್ಯತ್ವ ಕೇಳಿದ್ದೇನೆ. ರಾಜೀವ್ ಚಂದ್ರಶೇಖರ್ ಅವರಿಗೆ ರಾಜ್ಯಸಭೆ ಸದಸ್ಯತ್ವ ಕೊಡುವುದಿಲ್ಲ ಎಂದಾದರೆ ನನಗೆ ಕೊಡಿ ಎಂದಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಕ್ಷೇತ್ರದಲ್ಲಿ ಜೆ.ಸಿ.ಮಾಧುಸ್ವಾಮಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ನಾನು ತುಮಕೂರು ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಲ್ಲ. ತುಮಕೂರು ಅಭಿವೃದ್ಧಿಗಾಗಿ ಶ್ರಮವಹಿಸಿದ್ದೇನೆ. ನಾನು ಯಾವುದೇ ಕ್ಷೇತ್ರ ಕೇಳಿಲ್ಲ. ಕಳೆದ ಬಾರಿ ನನಗೆ ಸೋಲಾಗಿದೆ. ಆದರೆ, ನನ್ನ ಕಾರ್ಯವೈಖರಿ ನೋಡಿ ಹೈಕಮಾಂಡ್ ಯಾವ ಕ್ಷೇತ್ರ ಕೊಟ್ಟರೂ ತೊಂದರೆಯಿಲ್ಲ ಎಂದರು.
ಬಿಜೆಪಿ ನಾವು ಕಟ್ಟಿದ ಮನೆ: ಸೋಮಣ್ಣಗೆ ಆಗಿರುವ ಅನಾನುಕೂಲ ಬೇರೆಯವರಿಗೆ ಆಗಿರುತ್ತಿದ್ದರೆ ಯಾವ್ಯಾವ ರೀತಿ ಆಗಿರುತ್ತಿತ್ತೋ ಅದೆಲ್ಲ ಆಗುತ್ತಿತ್ತು. ಆದರೆ ಬಿಜೆಪಿ ನಾವು ಕಟ್ಟಿದ ಮನೆ. ಅರುಣ್ ಸೋಮಣ್ಣ ನಿಮ್ಮ ಜೊತೆಯಲ್ಲೇ ಇದ್ದಾರೆ ಎಂದು ತಿಳಿಸಿದರು.
ವಿಜಯನಗರದಲ್ಲಿ ಗೋವಿಂದರಾಜನಗರ ಮಂಡಲ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಕ್ಷೇತ್ರದ ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸೋಮಣ್ಣ, ಎರಡೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ ಬಗ್ಗೆ ನಾನು ಮಾತನಾಡಲ್ಲ. ಆದರೆ ಸೋತ ಬಳಿಕ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಹೋದಾಗ ಅವರು ನಡೆದುಕೊಂಡ ರೀತಿ ಖುಷಿಯಾಗುತ್ತದೆ. ಬಿಜೆಪಿಯಿಂದ ಸಾಮಾನ್ಯರಿಗೂ ಸಮಾನ ಅವಕಾಶ ಸಿಗುವಂತೆ ಆಗಿದೆ. ಕಳೆದ ಬಾರಿಗಿಂತ ಈ ಬಾರಿಯ ಚುನಾವಣೆ ನಮಗೆ ಸುಲಭವಿದೆ. ಈ ವರ್ಷವೂ ಯಾವುದೇ ಗ್ರಾಮ, ಹಳ್ಳಿಗೆ ಹೋದರೂ ಗೆಲ್ಲುವುದು ಮೋದಿ. ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ನಾನು ನೋಡಿದ ಸಿದ್ದರಾಮಯ್ಯ ಈಗ ಇಲ್ಲ: ಸಿದ್ಧರಾಮಯ್ಯ ನೂರೆಂಟು ತಪ್ಪುಗಳನ್ನು ಮಾಡಿಕೊಂಡಿದ್ದಾರೆ. ಎರಡನೇ ಬಾರಿಗೆ ಸಿಎಂ ಆದ ಮೇಲೆ ನಾನು ನೋಡಿದ ಸಿದ್ದರಾಮಯ್ಯ ಈಗ ಇಲ್ಲ. ನಿಮ್ಮ ಎಲ್ಲಾ ಭಾಗ್ಯಗಳನ್ನು ನೀವೇ ನಿಲ್ಲಿಸಬೇಕು ಎಂಬ ತೀರ್ಮಾನ ಮಾಡಿಕೊಂಡಿದ್ದೀರಿ. ಸಿದ್ದರಾಮಯ್ಯನವರೇ ಒಕ್ಕೂಟ ವ್ಯವಸ್ಥೆಯನ್ನು ಒಡೆಯಲು ಹೋಗಿ ಕಾಂಗ್ರೆಸ್ ನಗೆಪಾಟಿಲಿಗೀಡಾಗಿದೆ. ಸಿದ್ದರಾಮಯ್ಯ ಏಕೆ ಆ ತೀರ್ಮಾನ ತೆಗೆದುಕೊಂಡರೋ ಗೊತ್ತಿಲ್ಲ ಎಂದರು.
ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಮಾಜಿ ಸಚಿವ ವಿ ಸೋಮಣ್ಣ; ರಾಜ್ಯ ರಾಜಕಾರಣ ಕುರಿತು ಚರ್ಚೆ