ಮೈಸೂರು: "ಹನ್ನೊಂದು ತಿಂಗಳಿನಿಂದ ಒಂದು ರೀತಿ ವನವಾಸದಲ್ಲಿದ್ದೆ. ಈಗ ಅದರಿಂದ ಮುಕ್ತನಾಗಿದ್ದೇನೆ. ಹೆಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡರು ನನ್ನ ಪರ ಪ್ರಚಾರ ಮಾಡಿ ದೊಡ್ಡ ಶಕ್ತಿ ನೀಡಿದರು. ಅವರಿಗೆ ನಾನು ಋಣಿ" ಎಂದು ತೂಮಕೂರಿನ ನೂತನ ಬಿಜೆಪಿ ಸಂಸದ ವಿ.ಸೋಮಣ್ಣ ಹೇಳಿದ್ದಾರೆ.
ಇಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಮುಖಂಡ ಕಾಪು ಸಿದ್ದಲಿಂಗಸ್ವಾಮಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾತನಾಡಿದರು.
ತುಮಕೂರಿನಲ್ಲಿ ಬಿಜೆಪಿಗಿಂತ ಜೆಡಿಎಸ್ನವರಿಂದ ಹೆಚ್ಚು ಕೆಲಸ: "ಬಿಜೆಪಿ-ಜೆಡಿಎಸ್ ಈ ಚುನಾವಣೆಯಲ್ಲಿ ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಿವೆ. 28 ಕ್ಷೇತ್ರಗಳಲ್ಲೂ ಸಮನ್ವಯತೆ ಇತ್ತು. ತುಮಕೂರು ಕ್ಷೇತ್ರದಲ್ಲಿ ಬಿಜೆಪಿಗಿಂತ ಜೆಡಿಎಸ್ನವರೇ ಹೆಚ್ಚು ಕೆಲಸ ಮಾಡಿದರು. ದೇವೇಗೌಡರು ಹಾಗೂ ಕುಮಾರಸ್ವಾಮಿ ನಾಲ್ಕು- ಐದು ಬಾರಿ ಬಂದು ಪ್ರಚಾರ ಮಾಡಿ ನನಗೆ ದೊಡ್ಡ ಶಕ್ತಿ ನೀಡಿದರು. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಮನ್ವಯತೆ ಮುಂದಿನ ದಿನಗಳಲ್ಲೂ ರಾಜ್ಯದಲ್ಲಿ ಇದೇ ರೀತಿ ಮುಂದುವರೆಯಲಿದೆ" ಎಂದರು.
"ನಾನು ಹನ್ನೊಂದು ತಿಂಗಳಿನಿಂದ ಒಂದು ರೀತಿ ವನವಾಸದಲ್ಲಿದ್ದೆ. ಸದಾ ಕೆಲಸ ಮಾಡುವ ನನಗೆ ಕೆಲಸವೇ ಇಲ್ಲದಂತಾಗಿತ್ತು. ಈಗ ಅದರಿಂದ ಮುಕ್ತನಾಗಿದ್ದೇನೆ. ತುಮಕೂರಿನ ಜನ ನಾನು ಹೊರಗಿನವನೆಂದು ಒಂದು ಕ್ಷಣವೂ ಅಂದುಕೊಳ್ಳಲಿಲ್ಲ. ಆದರೆ ನಾಲ್ಕೈದು ನಾಯಕರು ಈ ಬಗ್ಗೆ ಮಾತನಾಡಿದ್ದರು. ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. 2 ಲಕ್ಷ ಲೀಡ್ ನಿರೀಕ್ಷೆ ಮಾಡಿದ್ದೆವು. ಆದರೆ 20 ಸಾವಿರ ಕಡಿಮೆಯಾಯಿತು" ಎಂದು ಹೇಳಿದರು.
'ದೊಡ್ಡ ಗಿಫ್ಟ್' ವಿಚಾರ: "ಅಮಿತ್ ಶಾ ಅವರು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಗಿಫ್ಟ್ ಬಗ್ಗೆ ಮಾತನಾಡಿದ್ದಕ್ಕೆ ಸ್ವಲ್ಪ ಸಮಸ್ಯೆಯಾಯಿತು. ಈಗ ಆ ರೀತಿಯ ಮಾತು ಆಡಲಿಲ್ಲ. ಸಚಿವ ಸ್ಥಾನ ಎಲ್ಲವೂ ಹೈಕಮಾಂಡ್ಗೆ ಬಿಟ್ಟಿದ್ದು. ಈಗಿನ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಒಂದು ಒಳ್ಳೆಯ ಅವಕಾಶ ಸಿಕ್ಕರೆ ಒಳ್ಳೆಯ ಕೆಲಸ ಮಾಡುತ್ತೇನೆ. ಎಲ್ಲಾ ಹೈಕಮಾಂಡ್ಗೆ ಬಿಟ್ಟಿದ್ದು. ನಾಳೆ ದೆಹಲಿಗೆ ಹೋಗುತ್ತೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ಬಿ. ಎಸ್ ಯಡಿಯೂರಪ್ಪ ನಿವಾಸಕ್ಕೆ ಬಿಜೆಪಿ ವಿಜೇತ ಅಭ್ಯರ್ಥಿಗಳ ಭೇಟಿ - B S Yediyurappa