ಮಂಗಳೂರು: ಮಂಗಳೂರಿನಲ್ಲಿ ಆಸ್ತಿ ತೆರಿಗೆ ಸುಮಾರು ನಾಲ್ಕು ಪಟ್ಟು ಹೆಚ್ಚಳವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಗದ್ದಲದಲ್ಲಿ ಸ್ಥಗಿತವಾಯಿತು. ಈ ವರ್ಷದ ಸ್ವಯಂಘೋಷಿತ ಆಸ್ತಿ ತೆರಿಗೆ ಸುಮಾರು ನಾಲ್ಕು ಪಟ್ಟು ಏರಿಕೆಯಾಗಿದೆ. ರಾಜ್ಯ ಸರ್ಕಾರ ಭೂಮಿಯ ಮಾರುಕಟ್ಟೆ ದರ ಹೆಚ್ಚಿಸಿದ ಪರಿಣಾಮ ಆಸ್ತಿ ತೆರಿಗೆಯಲ್ಲಿ ಹೆಚ್ಚಳವಾಗಿದೆ. ಅಷ್ಟು ಮಾತ್ರವಲ್ಲದೆ ಹಿಂದೆ ಕೇವಲ ಕಟ್ಟಡಗಳಿಗೆ ಇದ್ದ ತೆರಿಗೆಯನ್ನು ಭೂಮಿಯ ಮೇಲೂ ವಿಧಿಸಲಾಗಿದೆ. ಇದರಿಂದ ನಗರದಲ್ಲಿ ಆಸ್ತಿ ತೆರಿಗೆ ಭಾರಿ ಪ್ರಮಾಣದಲ್ಲಿ ಏರಿದೆ.
ಆಸ್ತಿ ತೆರಿಗೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ ಇಂದಿನ ಸಾಮಾನ್ಯ ಸಭೆಯಲ್ಲಿ ಗದ್ದಲವೇರ್ಪಟ್ಟಿತು. ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು, "ಸಾರ್ವಜನಿಕರಿಗೆ ಹೊರೆಯಾಗುವ ತೆರಿಗೆ ಇಳಿಸಿ" ಎಂದು ಪ್ಲಕಾರ್ಡ್ ಹಿಡಿದು ಘೋಷಣೆಗಳನ್ನು ಕೂಗಿದರು. ಬಳಿಕ ಸಭೆಯನ್ನು ಮುಂದೂಡಲಾಯಿತು. ಮತ್ತೆ ಸಭೆ ಆರಂಭವಾಗುತ್ತಿದ್ದಂತೆ ಮತ್ತೆ ಪ್ಲಕಾರ್ಡ್ ಹಿಡಿದ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಭಿತ್ತಿಪತ್ರ ಹಿಡಿದು ಘೋಷಣೆ ಮೊಳಗಿಸಿದರು.
ಈ ಕುರಿತು ಮಾತನಾಡಿದ ಕಾಂಗ್ರೆಸ್ ಪಕ್ಷದ ಮ.ನ.ಪಾ ಸದಸ್ಯ ಎ.ಸಿ.ವಿನಯರಾಜ್, "ಕೇಂದ್ರ ಸರ್ಕಾರದ ಸೂಚನೆಯಂತೆ ಹಿಂದಿನ ಬಿಜೆಪಿ ರಾಜ್ಯ ಸರ್ಕಾರದ ಆದೇಶದಂತೆ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಇಲ್ಲದ ಅಂಗಳಕ್ಕೂ ಈ ಬಾರಿ ತೆರಿಗೆ ಹಾಕಲಾಗಿದೆ. ಇದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ" ಎಂದು ಹೇಳಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, "ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಭೂಮಿ ದರ ಹೆಚ್ಚಿಸಿ ಆದೇಶ ಮಾಡಿದ್ದರಿಂದ ತೆರಿಗೆ ಹೆಚ್ಚಳವಾಗಿದೆ. ನಾವು ಹಳೇ ದರಕ್ಕೆ ಶೇ.3ರಷ್ಟು ಹೆಚ್ಚಿಸಲು ಸೂಚಿಸಿದ್ದರೂ ಆಯುಕ್ತರು ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಆಸ್ತಿ ತೆರಿಗೆ ಹೆಚ್ಚಳಕ್ಕೆ ಕಾರಣರಾಗಿದ್ದಾರೆ" ಎಂದು ದೂರಿದರು.
ಇದನ್ನೂ ಓದಿ: ಮಂಗಳೂರು: ಒಂದು ತಿಂಗಳೊಳಗೆ ಬಸ್‌ಗಳಿಗೆ ಬಾಗಿಲು ಅಳವಡಿಸಲು ಡಿಸಿ ಸೂಚನೆ