ಹುಬ್ಬಳ್ಳಿ : ಬೆಂಗಳೂರು ಮಾತ್ರವಲ್ಲ, ದೇಶಾದ್ಯಂತ ಕಡಿಮೆ ಬೆಲೆಗೆ ಈರುಳ್ಳಿ ಕೈಗೆಟುಕುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ 570 ಕಡೆ ಬೆಲೆ ಮಾನಿಟರಿಂಗ್ ಕೇಂದ್ರಗಳಿವೆ. ಎಲ್ಲ ಕಡೆಯೂ ಬೆಲೆ ನಿಯಂತ್ರಿಸಿ ಕಡಿಮೆ ಬೆಲೆಗೆ ಕೇಂದ್ರವೇ ಪೂರೈಸುತ್ತದೆ ಎಂದು ಹೇಳಿದರು.
ಇದೇ ವೇಳೆ ರಾಹುಲ್ ಗಾಂಧಿ ನೇತೃತ್ವದಲ್ಲಿ ತಾವೆಂದೂ ಅಧಿಕಾರಕ್ಕೆ ಬರೋದಿಲ್ಲ ಅನ್ನೋದು ಕಾಂಗ್ರೆಸ್ಸಿಗರಿಗೆ ಮನವರಿಕೆಯಾಗಿದೆ ಎಂದು ಚಾಟಿ ಬೀಸಿದರು.
ದೇಶದಲ್ಲಿ ರಾಹುಲ್ ಗಾಂಧಿ ನಾಯಕತ್ವದಲ್ಲಿ ತಾವು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂಬ ಸತ್ಯ ಕಾಂಗ್ರೆಸ್ಸಿಗರಿಗೆ ಗೊತ್ತಾಗಿದೆ. ಹಾಗಾಗಿ ಶತಾಯಗತಾಯ ಕೇಂದ್ರ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾರೆ ಅಷ್ಟೇ ಎಂದು ಟಾಂಗ್ ಕೊಟ್ಟರು.
ಯಾವ ಕಾಲಕ್ಕೂ ಬಿಜೆಪಿಯೇ ಬಲಿಷ್ಠ : ಭಾರತದಲ್ಲಿ ಯಾವುದೇ ಕಾಲಕ್ಕೂ ಬಿಜೆಪಿಯೇ ಬಲಿಷ್ಠವಾಗುತ್ತದೆ. ಸದ್ಯ ಮೋದಿ ನಾಯಕತ್ವದಲ್ಲಿ ಪಕ್ಷ ಪ್ರಬಲವಾಗಿದೆ. ಕೆಲವು ವರ್ಷಗಳ ನಂತರ ಮತ್ಯಾರೋ ಪ್ರಬಲ ನೇತಾರರು ಮುಂಚೂಣಿಗೆ ಬರುತ್ತಾರೆ. ಕಾಂಗ್ರೆಸ್ ಅಧಿಕಾರದ ನಿರೀಕ್ಷೆಯಲ್ಲೇ ಕಾಲ ಕಳೆಯಬೇಕಾಗುತ್ತದೆ ಎಂದು ಸಚಿವ ಜೋಶಿ ತಿಳಿಸಿದರು.
ಹತಾಶೆಯಲ್ಲಿ ಕೇಂದ್ರದ ನಿರ್ಣಯಗಳನ್ನು ಕಾಂಗ್ರೆಸ್ ವಿರೋಧಿಸುತ್ತದೆ : ಮುಂದೆಯೂ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂಬ ಹತಾಶೆಯಲ್ಲಿರುವ ಕಾಂಗ್ರೆಸ್, "ಒಂದು ದೇಶ ಒಂದು ಚುನಾವಣೆ"ಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಜೋಶಿ ಪ್ರತಿಕ್ರಿಯಿಸಿದರು.
ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಣಯವನ್ನು ಕಾಂಗ್ರೆಸ್ ವಿರೋಧಿಸುತ್ತಲೇ ಇದೆ. ಇದಕ್ಕೆ ಅವರಲ್ಲಿನ ಹತಾಶ ಮನಸ್ಥಿತಿಯೇ ಕಾರಣ ಎಂದು ಹೇಳಿದರು.
ಇದನ್ನೂ ಓದಿ : ಗ್ರಾಹಕರ ಕಣ್ಣೀರೊರೆಸಲು ಮುಂದಾದ ಕೇಂದ್ರ: ಇನ್ಮುಂದೆ 35 ರೂಪಾಯಿಗೆ ಕೆ.ಜಿ ಈರುಳ್ಳಿ - Onion Retail Sale