ಹುಬ್ಬಳ್ಳಿ: "ರಾಹುಲ್ ಗಾಂಧಿಗೆ ಸೋಲಿನ ಕನಸುಗಳು ಬೀಳ್ತಿವೆ. ಕಾಂಗ್ರೆಸ್ನವರಿಗೆ ನಾವು ಸೋಲ್ತೀವಿ, ಕಳೆದ ಬಾರಿಗಿಂತಲೂ ಕಡಿಮೆ ಸೀಟ್‌ಗಳನ್ನು ಪಡೀತೀವಿ ಅನ್ನೋದು ಅರ್ಥವಾಗಿದೆ. ಹೀಗಾಗಿ ಇವಿಎಂ ಮೇಲೆ ಅನುಮಾನಪಡುತ್ತಿದ್ದಾರೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಇಂದು ಮಾತನಾಡಿದ ಅವರು, "ಮಮತಾ ಬ್ಯಾನರ್ಜಿ ಕೂಡಾ ಕೇವಲ 40 ಸೀಟ್ ಗೆಲ್ತೀವಿ ಅಂತಾ ಹೇಳ್ತಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ಮತ್ತು ಇವಿಎಂ ಮೇಲೆ ಅವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ದುರಂತ. ಅವರಿಗೆ ಕರ್ನಾಟಕದಲ್ಲಿ ಗೆದ್ದರೆ ಇವಿಎಂ ಪ್ರಾಬ್ಲಮ್ ಇಲ್ಲ. ನಾವು ಗೆದ್ದರೆ ಇವಿಎಂ ಸಮಸ್ಯೆಯಾಗುತ್ತದೆ. ಆದರೆ ನಾವು ಸೋತರೂ ಇವಿಎಂ ಬಗ್ಗೆ ತಕರಾರು ತೆಗೆದಿಲ್ಲ" ಎಂದರು.
"ಮೋದಿ ನೇತೃತ್ವದಲ್ಲಿ ದೇಶದಲ್ಲಿ ಬಹಳ ಬದಲಾವಣೆಯಾಗಿದೆ. ಬಿಜೆಪಿ ಗೆಲ್ಲಿಸಬೇಕು ಅಂತಾ ಜನರೇ ತೀರ್ಮಾನ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ನವರು ಹತಾಶರಾಗಿ ಮಾತನಾಡುತ್ತಿದ್ದಾರೆ" ಎಂದು ಟೀಕಿಸಿದರು.
"2004ರಲ್ಲಿ ವಾಜಪೇಯಿ ಸರ್ಕಾರ ಇತ್ತು. 2009ರಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ನಾವು ಸೋತಿದ್ದೆವು. ಕಾಂಗ್ರೆಸ್ ಗೆಲುವಿನ ಬಗ್ಗೆ ನಾವು ಇವಿಎಂ ಹೆಸರು ತೆಗೆದು ತಕರಾರು ತೆಗೆದಿದ್ದೆವಾ?. ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಂಡಿದ್ದೆವು" ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಕೋಟ್ಯಂತರ ಹಣ ಲೂಟಿ ಮಾಡಿದೆ, ಹೀಗಾಗಿ ಐಟಿ ನೋಟಿಸ್ ಕೊಟ್ಟಿದೆ: ಪ್ರಹ್ಲಾದ್ ಜೋಶಿ - IT NOTICE