ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಬಂಧನ ವಾರೆಂಟ್ ವಿಚಾರದಲ್ಲಿ ರಾಜ್ಯ ಸರ್ಕಾರವೇ ಇದರ ಹಿಂದಿನ ಷಡ್ಯಂತ್ರದ ಸೂತ್ರಧಾರಿ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷವನ್ನು ಮಾಡಿದೆ. ಬಿ.ಎಸ್. ಯಡಿಯೂರಪ್ಪ ಅವರ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಹೊರಡಿಸುವುದು ತಪ್ಪು ಎಂದು ನ್ಯಾಯಾಲಯ ಸಹ ಸ್ಪಷ್ಟವಾಗಿ ಹೇಳಿದೆ. ರಾಹುಲ್ ಗಾಂಧಿ ಒತ್ತಡದ ಮೇರೆಗೆ ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಿರಿಯರಾದ ಯಡಿಯೂರಪ್ಪನವರನ್ನು ಬಂಧಿಸಿ ಸೇಡು ತೀರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರು. ಹೈಕೋರ್ಟ್ ಅದಕ್ಕೆ ತಕ್ಕ ಉತ್ತರ ಕೊಟ್ಟಿದೆ ಎಂದು ಹೇಳಿದರು.
ಧಾರವಾಡದಲ್ಲಿ ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಬಗ್ಗೆ ಪ್ರತಿಕ್ರಿಯಿಸಿ, 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಕಾರ್ಯಕರ್ತರು ಮತ್ತು ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ಧಾರವಾಡದಲ್ಲಿ ಆರೋಗ್ಯಯುತ ದೇಸಿ ಗೋವುಗಳನ್ನು ಸಾಗಿಸುತ್ತಿರುವ ಮಾಹಿತಿ ಬಂದಿದೆ. ಹಲ್ಲೆಗೊಳಗಾದ ವ್ಯಕ್ತಿ ಏನು ಮಾಡಿಲ್ಲ, ಗೋವುಗಳನ್ನು ಅಕ್ರವಾಗಿ ಸಾಗಿಸುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾನೆ. ಇದರಿಂದ ಆತನ ಮೇಲೆ ಹಲ್ಲೆ ಮಾಡುತ್ತಾರೆ ಎಂದರೆ ಇಂಥವರಿಗೆ ಸರ್ಕಾರದ ಭಯ ಇಲ್ಲ' ಎಂದರು.
'ತಪ್ಪಿತಸ್ಥರು ಯಾರಿದ್ದಾರೋ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಾನು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ಗೆ ಒತ್ತಾಯ ಮಾಡುತ್ತೇನೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಹೋರಾಟ ಮಾಡುತ್ತದೆ. ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವನ್ನು ಸಿಎಂ ಸಿದ್ದರಾಮಯ್ಯನವರು ನಡೆಸುತ್ತಿದ್ದಾರೆ' ಎಂದು ಟೀಕಿಸಿದರು.
'ಈ ಹಿಂದೆ ಕೃಷಿ ರಾಯಭಾರಿಯಾಗಿದ್ದ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವುದರಿಂದ ಚಿತ್ರರಂಗದ ಬೇರೆ ಯಾರೂ ಕೃಷಿ ರಾಯಭಾರಿಯನ್ನಾಗಿ ಮಾಡದಂತೆ ಕೂಗು ಕೇಳಿ ಬಂದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೋ ಒಬ್ಬರು ತಪ್ಪು ಮಾಡಿದರೆ ಅದನ್ನ ಇಡೀ ಚಿತ್ರರಂಗಕ್ಕೆ ಹೊಣೆ ಮಾಡುವುದು ಬೇಡ. ಯಾವುದೇ ವರ್ಗ ಅಥವಾ ವೃತ್ತಿ ವರ್ಗದವರನ್ನು ಹಾಗೇ ನೋಡುವುದು ತಪ್ಪು. ಅಭಿಮಾನಿಗಳ ಅತಿರೇಕದ ವರ್ತನೆಯನ್ನು ನಟರು ನಿಯಂತ್ರಿಸಬೇಕು. ಎಲ್ಲರನ್ನೂ ಒಂದೇ ರೀತಿಯಾಗಿ ನೋಡಬಾರದು. ಯಾವುದೇ ಸರ್ಕಾರವಾಗಲಿ, ವ್ಯಕ್ತಿಯ ಪೂರ್ವಾಪರ ವಿಚಾರಿಸಿ ಕೃಷಿ ರಾಯಭಾರಿಯನ್ನಾಗಿ ಮಾಡಬೇಕು' ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಸುಳ್ಳು ಆರೋಪದಿಂದ ನಮ್ಮ ತಂದೆ ಮುಕ್ತರಾಗುತ್ತಾರೆ; ಸಂಸದ ಬಿ.ವೈ. ರಾಘವೇಂದ್ರ - B Y Raghavendra