ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚುತ್ತಿದೆ. ಅಲ್ಲದೇ ಒಂದೂವರೆ ವರ್ಷದ ಒಳಗಾಗಿಯೇ ಸಿಎಂ ಮೇಲೆ ಗಂಭೀರ ಆರೋಪ ಬಂದಿರುವುದು ದುರ್ದೈವದ ಸಂಗತಿ. ಸಿದ್ದರಾಮಯ್ಯ ರಾಜ್ಯದ ಅತ್ಯಂತ ಲಜ್ಜೆಗೆಟ್ಟ ಮುಖ್ಯಮಂತ್ರಿಯಾಗಿದ್ದು, ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಶಾಸಕರು ಸುಮ್ಮನೇ ಇರುತ್ತಾರೆಯೇ? ಎಂದು ಅವರು ಕುಟುಕಿದರು.
ಭ್ರಷ್ಟಾಚಾರದ ಹಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಾಲುದಾರರು- ಸಚಿವ ಜೋಶಿ; ''ಮುಡಾ ಹಗರಣದಲ್ಲಿ ಸಿಎಂ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣದ ಬಗ್ಗೆಯೂ ನಾನು ಹಲವಾರು ಬಾರಿ ಹೇಳಿದ್ದೇನೆ. ಈ ಭ್ರಷ್ಟಾಚಾರದ ಹಣವನ್ನು ಕಾಂಗ್ರೆಸ್ ಹೈಕಮಾಂಡ್ಗೆ ಮುಟ್ಟಿಸಿಲ್ಲ ಅನ್ನೋದನ್ನ ಸಾಬೀತುಪಡಿಸಲಿ. ಭ್ರಷ್ಟಾಚಾರದ ಹಣದಲ್ಲೂ ಕಾಂಗ್ರೆಸ್ ಹೈಕಮಾಂಡ್ ಪಾಲುದಾರರು ಇದ್ದಾರೆ ಎಂದರು.
ಪಾಲುದಾರಿಕೆ ಇಲ್ಲದಿದ್ದರೆ ಹೈಕಮಾಂಡ್ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದ ಅವರು, ಭ್ರಷ್ಟಾಚಾರದಲ್ಲಿ ನ್ಯಾಯಾಂಗ ತನಿಖೆ ಅಂದರೆ ತಪ್ಪಿಸಿಕೊಳ್ಳಲು ರಹದಾರಿ ಇದಾಗಿದ್ದು, ಇದು ತಪ್ಪಿಸಿಕೊಳ್ಳಲು ಗೇಮ್ ಪ್ಲಾನ್ ಎಂಬುದು ಸ್ಪಷ್ಟವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು, ತಪ್ಪು ಮಾಡದೆ ಹೋದರೆ ಕಾಂಗ್ರೆಸ್ ನವರಿಗೆ ಏತಕ್ಕೆ ಭಯ. ಎರಡೂ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ನ ಹೈಕಮಾಂಡ್ ಪಾತ್ರವಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ನುಡಿದರು.
ಶುದ್ಧಹಸ್ತರಿದ್ದರೆ ಪ್ರಕರಣ ಸಿಬಿಐ ತನಿಖೆಗೆ ನೀಡಿ: ''ಸಿದ್ದರಾಮಯ್ಯ ಅವರು ಶುದ್ಧ ಹಸ್ತರಿದ್ದರೆ ಪ್ರಕರಣವನ್ನು ಸಿಬಿಐಗೆ ನೀಡಲಿ. ಈ ಪ್ರಕರಣದಲ್ಲಿ ರೆಡ್ ಹ್ಯಾಂಡ್ ಆಗಿ ಸಿಎಂ ಹಾಗೂ ಸರ್ಕಾರ ಭಾಗಿಯಾಗಿದೆ'' ಎಂದು ದೂರಿದರು.
ಯಾದಗಿರಿ ಪಿಎಸ್ಐ ವರ್ಗಾವಣೆ ವಿಚಾರದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತಲೆಮರೆಸಿಕೊಂಡಿದ್ದಾರೆ. ಶಾಸಕರು ಸಹ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದಾರೆ. ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಗಳನ್ನು ಹರಾಜಿಗಿಟ್ಟಿದ್ದಾರೆ. ವರ್ಗಾವಣೆ ವಿಚಾರದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಪೊಲೀಸ್ ಅಧಿಕಾರಿಗಳನ್ನು ಹಾಗೂ ಬೇರೆ ಬೇರೆ ಅಧಿಕಾರಿಗಳನ್ನು ಹರಾಜು ಮಾಡುವ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.
ಇದನ್ನೂ ಓದಿ : "ಹಗರಣದಲ್ಲಿ ಎಲ್ಲಾ ಸಚಿವರು ಪಾಲುದಾರರೇ ಅದಕ್ಕಾಗಿ ಸಂಪುಟ ಸಭೆಯಲ್ಲಿ ನಿರ್ಣಯ": ಮಾಜಿ ಸಿಎಂ ಬೊಮ್ಮಾಯಿ - Basavaraj Bommai