ಹುಬ್ಬಳ್ಳಿ : ಲೋಕಸಭೆ ಟಿಕೆಟ್ ಹಂಚಿಕೆ ಬಗ್ಗೆ ಊಹಾಪೋಹಗಳು ಕೇಳಿ ಬರುತ್ತಿವೆ. ಅದಕ್ಕೆ ಉತ್ತರ ಕೊಡಲ್ಲ. ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳಬರಿಗೆ ಟಿಕೆಟ್ ಕೊಡಲ್ಲ, ಹೊಸಬರಿಗೆ ಅವಕಾಶ ಕೊಡ್ತಾರೆ ಅನ್ನೋದು ಊಹಾಪೋಹ. ಎಂಟು ಬಾರಿ ಗೆದ್ದವರಿಗೂ ಅವಕಾಶ ಕೊಟ್ಟಿದ್ದೇವೆ ಎಂದರು. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವನು ಕಾಂಗ್ರೆಸ್ ಪಾರ್ಟಿಗೆ ಹತ್ತಿರ ಇದ್ದಾನೆ. ನಾಸಿರ್ ಹುಸೇನ್ ಕನಿಷ್ಠ ಪಕ್ಷ ಕ್ಷಮೆ ಕೇಳಬೇಕು, ಕಾಂಗ್ರೆಸ್‌ನವರು ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದರು.
ಘೋಷಣೆ ಕೂಗಿದ ಆರೋಪಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಜೊತೆ ಫೊಟೋದಲ್ಲಿ ಇದ್ದಾನೆ. ಒಳಗೊಳಗೆ ಪುಷ್ಟೀಕರಣಕ್ಕೆ ತಲೆ ಮೇಲೆ ಕೂರಿಸಿಕೊಂಡು, ಅಪ್ಪಿ ಮುದ್ದಾಡುತ್ತಾರೆ. ಆರೋಪಿಗೆ ನಾಸಿರ್ ಹುಸೇನ್ ಆಶೀರ್ವಾದ ಇದೆ. ನಾಸಿರ್ ಹುಸೇನ್ ಬೇಷರತ್ ಕ್ಷಮೆ ಕೇಳಬೇಕು. ಅಲ್ಲಿಯವರೆಗೆ ಪ್ರಮಾಣ ವಚನ ಸ್ವೀಕರಿಸಬಾರದು ಎಂದು ಹೇಳಿದರು. ರಾಮೇಶ್ವರಮ್ ಕೆಫೆ ಬ್ಲಾಸ್ಟ್ ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಆಗಿದೆ. ರಾಜ್ಯ ಸರ್ಕಾರ ಸರಿಯಾದ ತನಿಖೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಸುಧಾಮೂರ್ತಿಗೆ ರಾಜ್ಯಸಭೆಗೆ ನಾಮನಿರ್ದೇಶನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹುಬ್ಬಳ್ಳಿಯ ಹೆಮ್ಮೆಯ ಪುತ್ರಿ ಸುಧಾಮೂರ್ತಿ ಅವರನ್ನ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿರುವುದು ಸಂತಸದ ವಿಷಯ. ಅವರು ಒಳ್ಳೆಯ ಲೇಖಕರಿದ್ದಾರೆ. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮಹಿಳಾ ದಿನಾಚರಣೆಯಂದೇ ಅವರನ್ನ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಸಂತಸ ತಂದಿದೆ. ಸುಧಾಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿಯವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನರೇಗಾ ಹಣ ಬಳಕೆ ಬಗ್ಗೆ ಅನೇಕ ರಾಜ್ಯಗಳಲ್ಲಿ ಮಾಹಿತಿ ಕೊಟ್ಟಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಆಡಿಟ್ ರಿಪೋರ್ಟ್ ಕೊಟ್ಟಿಲ್ಲ. ರಾಜ್ಯ ಸರ್ಕಾರ ನಿಮ್ಮದಿದೆ. ನರೇಗಾಕ್ಕೆ ದುಡ್ಡು ಕೊಡಿ. ಕಾಂಗ್ರೆಸ್‌ನವರು ಮಹಾದಾಯಿಗೆ ಅಡ್ಡಗಾಲು ಹಾಕುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಹನಿ ನೀರು ಬಿಡಲ್ಲ ಅಂದವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ. ಮೋದಿಯವರು ಸಿಲಿಂಡರ್ ದರ ಮುನ್ನೂರು ರೂಪಾಯಿ ಇಳಿಸಿದ್ದಾರೆ. ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಹಿಳೆಯರು ಮೋದಿಯವರನ್ನು ಮತ್ತೊಮ್ಮೆ ಬೆಂಬಲಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಶಿವಲಿಂಗಕ್ಕೆ ರುದ್ರಾಭಿಷೇಕ: ಮಹಾಶಿವರಾತ್ರಿ ಪ್ರಯುಕ್ತ ಹುಬ್ಬಳ್ಳಿಯ ಜಿಮ್ ಖಾನ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪಾಲ್ಗೊಂಡು ಶಿವಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಿದರು.
ವಾಣಿಜ್ಯ ನಗರಿಯ ಜಿಮ್ ಖಾನ ಮೈದಾನದಲ್ಲಿ ಪ್ರಹ್ಲಾದ್ ಜೋಶಿ ಅವರ ಸಾರಥ್ಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ವರ್ಷ ಹುಬ್ಬಳ್ಳಿ -ಧಾರವಾಡ ಅವಳಿ ನಗರದ ಭಕ್ತರಿಗೆ ಇಲ್ಲಿ ಅಯೋಧ್ಯಾ ಮಾದರಿಯಲ್ಲಿ ಶ್ರೀ ರಾಮೇಶ್ವರ ದರ್ಶನ ಭಾಗ್ಯ ಕಲ್ಪಿಸಿರುವುದು ಮಹಾಶಿವರಾತ್ರಿ ಆಚರಣೆಗೆ ಇನ್ನಷ್ಟು ಮೆರುಗು ನೀಡಿದೆ.
ಶಿವಲಿಂಗಕ್ಕೆ ರುದ್ರಾಭಿಷೇಕ ಸಲ್ಲಿಕೆ ಕಾರ್ಯಕ್ರಮದಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ, ಹು-ಧಾ ನಗರಪಾಲಿಕೆ ಮಹಾ ಪೌರರಾದ ಶ್ರೀಮತಿ ವೀಣಾ ಭಾರದ್ವಾಡ ಮತ್ತು ಪಾಲಿಕೆ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಭಕ್ತ ಸಮೂಹದ ಉಪಸ್ಥಿತಿ ಇತ್ತು.
ಇದನ್ನೂ ಓದಿ : ಬೆಂಗಳೂರು ಸ್ಫೋಟ ಪ್ರಕರಣದ ತನಿಖೆಯನ್ನು ಎನ್ಐಎಗೆ ನೀಡಬೇಕು: ಪ್ರಹ್ಲಾದ್ ಜೋಶಿ