ಮಂಡ್ಯ: ನಿಮ್ಮೆಲ್ಲರ ನಿರೀಕ್ಷೆಯಂತೆ ನಾನು ಕೇಂದ್ರ ಕೃಷಿ ಸಚಿವನಾಗುವ ಭರವಸೆ ಇತ್ತು. ಆದರೆ ಆ ಖಾತೆ ನನಗೆ ಸಿಗಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ಪಾಂಡವಪುರದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ನನಗೆ ನೋವಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ ಎಂದು ಹೇಳಿದರು.
ದೇವರು ನನಗೆ ಮುಂದೆ ಇನ್ನು ದೊಡ್ಡ ಮಟ್ಟದ ಶಕ್ತಿ ಕೊಡುತ್ತಾನೆ ಎಂಬ ನಂಬಿಕೆ ಇದೆ. ಹೆಚ್ಡಿಕೆ ಗೆದ್ದಿದ್ದಾರೆ ಇನ್ನು ಕಾವೇರಿ ಸಮಸ್ಯೆ ಬಗೆ ಹರಿಯುತ್ತದೆ ಎಂದು ನನ್ನ ಹಳೆ ಸ್ನೇಹಿತರು ಹೇಳುತ್ತಾರೆ, ಅವರನ್ನು ನಾನು ಸ್ನೇಹಿತರು ಅನ್ನುವುದಕ್ಕೆ ಹೋಗಲ್ಲ ಎಂದು ಪರೋಕ್ಷವಾಗಿ ಸಚಿವ ಚಲುವರಾಯಸ್ವಾಮಿಗೆ ಟಾಂಟ್ ಕೊಟ್ಟರು.
ಲೋಕಸಭಾ ಚುನಾವಣೆ ಪ್ರಚಾರ ಕೂಡ ಇದೇ ಸ್ಥಳದಲ್ಲಿ ಆಗಿತ್ತು. ಆ ದಿನ ಕನಿಷ್ಠ 50 ಸಾವಿರ ಬಹುಮತ ಕೊಡಿ ಅಂತಾ ಮನವಿ ಮಾಡಿದ್ದೆ. ಆ ಮನವಿಗೆ ಓಗೊಟ್ಟ ನಿಮಗೆ ವಿಶೇಷ ಗೌರವಪೂರ್ವಕ ವಂದನೆಗಳು. ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಹೆಚ್ಚಿನ ಬಹುಮತ ಕೊಟ್ಟಿದ್ದೀರಿ. ಮಂಡ್ಯದ ಜನ ಕೊನೆ ಹಂತದಲ್ಲಿ ನಾನು ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಒತ್ತಡ ಹಾಕಿದರು. ಹೆಚ್ಚು ಸಮಯ ಪ್ರಚಾರಕ್ಕೆ ಬರಲು ಆಗಲಿಲ್ಲ. ಆದರೂ ಈ ಬೃಹತ್ ಬಹುಮತ ಕೊಟ್ಟು ಗೆಲ್ಲಿಸಿದ್ದೀರಿ. ಕುಮಾರಣ್ಣ ಗೆದ್ದರೆ ಮಂಡ್ಯಕ್ಕೆ ಮಾತ್ರವಲ್ಲ, ಇಡೀ ದೇಶದ ರೈತರಿಗೆ ಉಪಯೋಗ ಅಂತಾ ನೀವೇ ಚುನಾವಣೆ ಮಾಡಿದ್ರಿ. ನಿಮ್ಮ ಕುಟುಂಬದ ಅಣ್ಣನೋ, ತಮ್ಮನೋ ಅಂತಾ ಭಾವಿಸಿ ಮತಕೊಟ್ಟಿದ್ದೀರಿ. ಇದು ನನ್ನ ಗೆಲುವಲ್ಲ, ಮಂಡ್ಯ ಜಿಲ್ಲೆಯ ಜನತೆಯ ಗೆಲುವು ಎಂದು ಹೇಳಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕುಮಾರಸ್ವಾಮಿ ಅವರು ಸಿಎಂ ಆಗಿ ನಾಡಿಗೆ ಕೊಟ್ಟ ಕೊಡುಗೆ ಮರೆಯಲಾಗಲ್ಲ. ಮೊದಲು ಸಿಎಂ ಆದಾಗ ಬಿಜೆಪಿಯವರ ಪೂರ್ಣ ಬೆಂಬಲ ಇತ್ತು. ಎರಡನೇ ಬಾರಿ ಸಿಎಂ ಆದಾಗ ಕಾಂಗ್ರೆಸ್‌ನ ಸಹವಾಸ ಬೇಡ ಎಂದು ಹೇಳಿದ್ರು. ಕಾಂಗ್ರೆಸ್ ಪಕ್ಷವನ್ನ ದೇಶದಲ್ಲೇ ಕಿತ್ತೊಗೆಯುವ ಕೆಲಸ ಆಗ್ತಿದೆ. ಅದಕ್ಕೆ ಮಂಡ್ಯ, ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ, ಜೆಡಿಎಸ್ ಗೆಲುವೇ ಸಾಕ್ಷಿ. ಮೇಲುಕೋಟೆ ಕ್ಷೇತ್ರದ ಜನತೆ 50 ಸಾವಿರಕ್ಕೂ ಹೆಚ್ಚು ಮತ ಕೊಟ್ಟಿದ್ದೀರಿ. ಆ ಮೂಲಕ ಹೆಚ್ಚಿನ ಜವಾಬ್ದಾರಿ ಕೊಟ್ಟಿದ್ದೀರಿ. ನಿಮ್ಮ ಋಣ ತೀರಿಸುವ ಕೆಲಸವನ್ನ ಮಾಡುತ್ತೇವೆ ಎಂದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ನರೇಂದ್ರ ಮೋದಿ ಅವರು ಕುಮಾರಸ್ವಾಮಿಯವರನ್ನು ಗುರುತಿಸಿ ಉನ್ನತ ಖಾತೆ ಕೊಟ್ಟಿದ್ದಾರೆ. ಅವರಿಂದ ಮಂಡ್ಯ, ರಾಜ್ಯಕ್ಕೆ ದೊಡ್ಡ ಕೊಡುಗೆ ಸಿಗುತ್ತೆ. ಬಿಜೆಪಿ, ಜೆಡಿಎಸ್‌ನವರು ಒಟ್ಟಿಗೆ ಸೇರಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುತ್ತೇವೆ ಎಂದರು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಚುನಾವಣೆಗೂ ಮುನ್ನ ಜೆಡಿಎಸ್ ಪಕ್ಷ ನಿರ್ನಾಮ ಆಗುತ್ತದೆ ಅಂತಿದ್ರು. ದೇವೇಗೌಡರು ಕಟ್ಟಿ ಬೆಳೆಸಿದ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್-ಬಿಜೆಪಿಯವರು ಸೇರಿ ಹೆಚ್ಡಿಕೆ ಗೆಲುವಾಗಿದೆ. ಆ ಮೂಲಕ ಜೆಡಿಎಸ್ ಪಕ್ಷಕ್ಕೆ ಹೊಸ ಚೈತನ್ಯ ತಂದುಕೊಟ್ಟಿದ್ದೀರಿ. ಅದರ ಫಲವಾಗಿ ಕೇಂದ್ರದಲ್ಲಿ ಕುಮಾರಸ್ವಾಮಿ ಅವರಿಗೆ ಅತ್ಯುನ್ನತ ಖಾತೆ ಸಿಕ್ಕಿದೆ ಎಂದು ಹೇಳಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಂಡ್ಯ ಜಿಲ್ಲೆಯ ತಂದೆ, ತಾಯಂದಿರ ಆಶೀರ್ವಾದಿಂದ ಕುಮಾರಣ್ಣ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. 2018ರಲ್ಲೂ ಮಂಡ್ಯ ಜಿಲ್ಲೆಯ ಜನರ ಆಶೀರ್ವಾದಿಂದ ಸಿಎಂ ಆಗಿದ್ದರು. ಈಗ ಕೇಂದ್ರದ ಸಚಿವರಾಗಲು ಮಂಡ್ಯ ಜಿಲ್ಲೆಯ ಮತದಾರರು ಕಾರಣ. ಮಂಡ್ಯ ಜಿಲ್ಲೆಯ ಮತದಾರರನ್ನ ನಾವೆಂದೂ ಮರೆಯಲು ಸಾಧ್ಯವಿಲ್ಲ ಎಂದರು.
ಭರ್ಜರಿ ಬಾಡೂಟ: ಪಾಂಡವಪುರ ಕ್ರೀಡಾಂಗಣ ಸಮೀಪ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭಕ್ಕೂ ಮುನ್ನ ಜನರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು. ಬರೋಬ್ಬರಿ 5 ಟನ್ ಮಟನ್, 2.5 ಟನ್ ಚಿಕನ್, ಬೋಟಿ, 1 ಲಕ್ಷ ಮೊಟ್ಟೆ, ಮುದ್ದೆ, ಗೊಜ್ಜು, ಮಟನ್, ಚಿಕನ್ ಚಾಪ್ಸ್, ಎಗ್ ಬುರ್ಜಿ, ಶಾವಿಗೆ ಪಾಯಸ, ಅನ್ನ, ಸಾಂಬಾರ್, ರಸಂ ಸೇರಿ ತರಹೇವಾರಿ ಖಾದ್ಯ ತಯಾರಿ ಮಾಡಲಾಗಿತ್ತು. ಭರ್ಜರಿ ಬಾಡೂಟ ಸವಿದ ಬಳಿಕ ವೇದಿಕೆಯತ್ತ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಆಗಮಿಸಿದರು.
ಪಾಂಡವಪುರಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಸಮಾರಂಭದ ವೇದಿಕೆವರೆಗೂ ಹೆಚ್ಡಿಕೆ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದರು.
ಇದನ್ನೂ ಓದಿ: ಕಬಿನಿಯಿಂದ ತಮಿಳುನಾಡಿಗೆ ನಿತ್ಯ 8,000 ಕ್ಯುಸೆಕ್ ನೀರು ಬಿಡಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ: ಸಿಎಂ - Cauvery Water Issue