ತುಮಕೂರು: ರಾಜ್ಯಕ್ಕೆ ಯಾವ್ಯಾವ ಕೈಗಾರಿಕೆ ತರಬಹುದು ಎಲ್ಲವನ್ನು ಕೂಲಕಂಷವಾಗಿ ಚರ್ಚೆ ಮಾಡ್ತಿನಿ. ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ಕೊಡುವುದು ನನ್ನ ಜವಾಬ್ದಾರಿಯಾಗಿದೆ. ಜೊತೆಗೆ ದೇಶದ ಅಭಿವೃದ್ಧಿಯನ್ನು ನಾವು ಕಾಣಬೇಕು ಎಂದು ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು.
ಸೋಮವಾರ ಶಿರಾ ತಾಲೂಕಿನ ಸ್ಪಟಿಕಪುರಿ ಮಹಾಸಂಸ್ಥಾನ ಪೀಠಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಇಲಾಖೆಯಲ್ಲಿ ವಿಚಾರ ತಿಳಿದುಕೊಳ್ಳಲಿಕ್ಕೆ ಪ್ರಯತ್ನ ಮಾಡುತ್ತೇನೆ. ನಮ್ಮ ಮುಂದೆ ಕಠಿಣ ಹಾದಿ ಇದೆ. ಪ್ರಧಾನಿ ಅವರು ನನ್ನ ಮೇಲೆ ವಿಶ್ವಾಸ ಇಟ್ಟು ಎರಡು ಬೃಹತ್ ಇಲಾಖೆಗಳನ್ನು ಕೊಟ್ಟಿದ್ದಾರೆ. ಈ ಎರಡು ಇಲಾಖೆಗಳು ದೇಶದ ಜಿಡಿಪಿಗೆ ಆರ್ಥಿಕ ಶಕ್ತಿ ತುಂಬುವಂತಹದ್ದಾಗಿವೆ. ಯುವಕರಿಗೆ ಉದ್ಯೋಗ ಒದಗಿಸುವಂತಹದ್ದು. ಈ ಎರಡು ಇಲಾಖೆಯಲ್ಲಿ ಅವಕಾಶಗಳು ಹೆಚ್ಚಿವೆ. ಆದರೆ, ಎಲ್ಲಾ ಕಡೆನು ಸ್ಥಳೀಯರಿಗೆ ಉದ್ಯೋಗ ಇಲ್ಲ ಅನ್ನೋ ಕೂಗು ಇದೆ. ಇದರ ಬಗ್ಗೆ ಏನು ನಿಯಮ ಮಾಡೋಕೆ ಆಗಲ್ಲ. ಸಂಬಂಧಪಟ್ಟ ಉದ್ಯಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿಳುವಳಿಕೆ ಮೂಡಿಸಿ ಸ್ಥಳೀಯರಿಗೆ ಉದ್ಯೋಗ ಕೊಡಿಸಲು ಶ್ರಮಿಸಲಾಗುವುದು ಎಂದು ಹೇಳಿದರು.
ಇವಿಎಂ ಹ್ಯಾಕ್ ಅನ್ನೋದೆಲ್ಲಾ ಊಹಾಪೋಹ; ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಬೀಳುತ್ತೆ ಎಂಬ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಚುನಾವಣೆ ನಂತರ ರಾಜಕೀಯದಲ್ಲಿ ಹಲವು ಬದಲಾವಣೆ ಆಗಬಹುದು ಅಂತ ಹೇಳಿದ್ದೆ. ಸ್ವಲ್ಪ ದಿವಸ ಕಾದು ನೋಡೋಣ ಎಂದರು. ಇನ್ನು ದೇಶದಲ್ಲಿ ಇವಿಎಂ ಮತ ಯಂತ್ರ ಹ್ಯಾಕ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇದನ್ನು ಹಲವು ವರ್ಷಗಳಿಂದ ಹೇಳಿಕೊಂಡು ಬರ್ತಿದ್ದಾರೆ. ಅದನ್ನು ಈವರೆಗೆ ಯಾರಿಗೂ ಸಾಬೀತು ಮಾಡಲಿಕ್ಕೆ ಆಗಿಲ್ಲ. ಅದೆಲ್ಲಾ ಊಹಾಪೋಹ ಅಂತ ಎಲೆಕ್ಷನ್ ಕಮಿಷನರ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ನಲ್ಲೂ ಇದರ ಬಗ್ಗೆ ಚರ್ಚೆ ಆಗಿದೆ. ಇದರ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದವರು ಇನ್ನೂ ಸಾಕ್ಷಿ ಕೋಡೋಕೆ ಆಗಿಲ್ಲ. ಕರ್ನಾಟಕದಲ್ಲೂ 136 ಸೀಟ್ ಗೆದ್ರಲ್ಲ, ಆಗ ಇವಿಎಂ ಮಷಿನ್ ಹ್ಯಾಕ್ ಮಾಡಿದ್ರಾ ಎಂದು ಇದೇ ವೇಳೆ ಕುಮಾರಸ್ವಾಮಿ ಪ್ರಶ್ನಿಸಿದರು.
ಸಿದ್ದಗಂಗಾ ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದ ಹೆಚ್ಡಿಕೆ; ಇದೇ ವೇಳೆ ಹೆಚ್ಡಿಕೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.