ಬೆಂಗಳೂರು: ''ಜನರು ಕಟ್ಟುವ ಹಣ ದೇಶದ ಬೆಳವಣಿಗೆಗೆ ಬಳಕೆ ಮಾಡಬೇಕು. ಇದರಲ್ಲಿ ನನ್ನದು, ನಿನ್ನದು ಎನ್ನುವ ಪ್ರಶ್ನೆ ಬರುವುದಿಲ್ಲ'' ಎಂದು ನನ್ನ ತೆರಿಗೆ, ನನ್ನ ಹಕ್ಕು ಹೆಸರಿನಲ್ಲಿ ಕಾಂಗ್ರೆಸ್ ಹೋರಾಟವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟೀಕಿಸಿದ್ದಾರೆ.
ನಗರದ ಚರ್ಚ್ ಸ್ಟ್ರೀಟ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ''ಭಾರತವೇ ಒಂದು ದೇಶ. ದೇಶದ ಎಲ್ಲಾ ಜನರು ತೆರಿಗೆ ಕಟ್ಟುತ್ತಾರೆ. ದೇಶದ ಜನರ ತೆರಿಗೆ ಹಣ ದೇಶದ ಬೆಳವಣಿಗೆಗೆ ಬಳಕೆ ಮಾಡಿಕೊಳ್ಳಲಾಗುವುದು. ಇದರಲ್ಲಿ ನನ್ನದು, ನಿನ್ನದು ಅಂತಿಲ್ಲ. ಎಲ್ಲರಿಗೂ ಕೇಳುವ ಹಕ್ಕಿದೆ'' ಎಂದು ಕಾಂಗ್ರೆಸ್ ಹೋರಾಟವನ್ನು ಟೀಕಿಸಿದರು.
ದೇಶದಲ್ಲಿ ರೈತರ ಹಿತ ಕಾಪಾಡುವ ಕೆಲಸ ಮೋದಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಜೆಟ್ 27 ಸಾವಿರ ಕೋಟಿಯಾಗಿತ್ತು. 2014ರ ಬಳಿಕ ಈಗ ಒಂದು ಲಕ್ಷ ಕೋಟಿಯಷ್ಟಾಗಿದೆ. ಎಂಎಸ್ಪಿಗೂ ಸಾವಿರಾರು ಕೋಟಿ ರೂ. ಹಣ ಮೀಸಲಿಡಲಾಗಿದೆ.
ಈಗ ದೇಶದಲ್ಲಿ 'ಮೋದಿ ಕಾ ಪರಿವಾರ್' ಅಭಿಯಾನ ನಡೆಯುತ್ತಿದೆ. ನಾನೂ ಕೂಡ ಮೋದಿ ಕಾ ಪರಿವಾರದವನಾಗಿದ್ದೇನೆ ಎಂದರು.
ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ಕಾಂಗ್ರೆಸ್ ದಿಲ್ಲಿಯಲ್ಲಿ ಭ್ರಷ್ಟಾಚಾರಿ ಆಪ್ ಪಕ್ಷದ ಜೊತೆ ಕೈ ಜೋಡಿಸಿದೆ. ದಿಲ್ಲಿಯಲ್ಲಿ ಆಪ್ ಸಚಿವರು ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದಿದ್ದಾರೆ. 2g ಸ್ಪ್ರೆಕ್ಟಮ್ ಭ್ರಷ್ಟಾಚಾರ ಮಾಡಿದ ರಾಜಾ ಸನಾತನ ಧರ್ಮದ ಬಗ್ಗೆ ಮಾತಾಡ್ತಾರೆ ಎಂದು ಕಿಡಿಕಾರಿದರು.
ವಿಕಸಿತ ಭಾರತ ಸಂಕಲ್ಪವೇ ಒಂದು ಉತ್ತಮ ಕಾರ್ಯಕ್ರಮ. ಅಮೃತಕಾಲದ ವೇಳೆಗೆ ದೇಶ ಹೇಗೆಲ್ಲಾ ಇರಬೇಕು ಅನ್ನೋದರ ಬಗ್ಗೆ ನಿರ್ಣಯ ಮಾಡಲು, ದೇಶವನ್ನು ಸುರಕ್ಷಿತವಾಗಿಡಲು ಮೋದಿ ಕನಸು ಕಂಡಿದ್ದಾರೆ. ಆದರೆ, ಕರ್ನಾಟಕದ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಾರೆ. ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಉತ್ತರ ಏನು? ಯಾವಾಗ ಕ್ರಮ ಅಂದರೆ ಎಫ್ಎಸ್ಎಲ್ ವರದಿ ಬಂದಿಲ್ಲ ಅಂತಾರೆ. ದೇಶದೊಳಗೆ ಇಂತಹ ದೇಶದ್ರೋಹಿಗಳಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಅಂತಿದ್ದಾರೆ, ಇಲ್ಲಿ ಹೀಗೆಲ್ಲಾ ನಡೆಯುತ್ತಿದೆ. ದೇಶದಲ್ಲಿ ಒಂದೇ ಗ್ಯಾರಂಟಿ. ಅದು ಮೋದಿ. ಮೋದಿ ಗ್ಯಾರಂಟಿಗೆ ಮಾತ್ರ ಬೆಲೆ ಇದೆ ಎಂದರು.
ಬೆಂಗಳೂರಿನ ವಿಕಸಿತ ಭಾರತ ರಾಯಭಾರಿಗಳ ಸಮಾವೇಶ: ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರರಹಿತ, ಅಭಿವೃದ್ಧಿಪರ ಸರ್ಕಾರವನ್ನು ನೀಡಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು. ಬೆಂಗಳೂರಿನ ಚರ್ಚ್ ಸ್ಟ್ರೀಟ್‍ನ ಬಿ ಹೈವ್ ಪ್ರೀಮಿಯಂನಲ್ಲಿ ನಡೆದ 'ಬೆಂಗಳೂರಿನ ವಿಕಸಿತ ಭಾರತ ರಾಯಭಾರಿಗಳ ಸಮಾವೇಶ'ದಲ್ಲಿ ಮಾತನಾಡಿದ ಅವರು, ಭವಿಷ್ಯವು ಕೂಡ ಭ್ರಷ್ಟಾಚಾರರಹಿತ ಸರಕಾರ ನಮ್ಮದಾಗಿರಲಿದೆ ಎಂದರು.
ಹಿಂದಿನ ಕಾಂಗ್ರೆಸ್ ಪಕ್ಷದ ಪ್ರಧಾನಿ ರಾಜೀವ್ ಗಾಂಧಿಯವರು 100 ರೂಪಾಯಿ ಅನುದಾನ ಫಲಾನುಭವಿಗೆ ಬಿಡುಗಡೆ ಆದರೆ, ಕೇವಲ 15 ರೂಪಾಯಿ ಅಂತ್ಯದಲ್ಲಿ ಸಂಬಂಧಿತರಿಗೆ ತಲುಪುತ್ತದೆ ಎಂದಿದ್ದರು. ಈಗ ನೇರ ಫಲಾನುಭವಿಗೆ ಸೌಲಭ್ಯ (ಡಿಬಿಟಿ) ಮೂಲಕ 100ಕ್ಕೆ 100ರಷ್ಟು ಮೊತ್ತ ಸಂಬಂಧಿತರನ್ನು ತಲುಪುತ್ತದೆ. ನಡುವೆ ಒಂದೇ ಒಂದು ಪೈಸೆಯೂ ಮಧ್ಯವರ್ತಿಗಳಿಗೆ ಸೇರದೆ ಇರುವಂಥ ವ್ಯವಸ್ಥೆಯನ್ನು ನಾವು ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.
ದಶಕಗಳ ಕಾಲ ಗರೀಬಿ ಹಠಾವೋ ಘೋಷಣೆ: ನೆಹರೂ ಅವರ ಆಡಳಿತದಿಂದ ಸೋನಿಯಾ ಅವರ ಆಡಳಿತವರೆಗೆ ಹಲವು ದಶಕಗಳ ಕಾಲ ದೇಶದಲ್ಲಿ ಗರೀಬಿ ಹಠಾವೋ ಘೋಷಣೆ, ಆಶ್ವಾಸನೆ ಕೇಳಿಬರುತ್ತಿತ್ತು. ಆದರೆ, ಅದು ಘೋಷಣೆಯಷ್ಟೇ ಆಗಿತ್ತು. ನಮ್ಮ ಆಡಳಿತಾವಧಿಯಲ್ಲಿ 25 ಕೋಟಿ ಜನರು ಬಡತನ ರೇಖೆಗಿಂತ ಮೇಲಕ್ಕೆ ಬಂದಿದ್ದಾರೆ ಎಂದು ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
ಇದನ್ನೂ ಓದಿ: ಚಾಮರಾಜನಗರದಿಂದ ಕೆ.ಶಿವರಾಂ ಪತ್ನಿಗೆ ಲೋಕಸಭಾ ಟಿಕೆಟ್ ನೀಡಿ: ಛಲವಾದಿ ಮಹಾಸಭಾ ಆಗ್ರಹ