ಉಳ್ಳಾಲ(ದಕ್ಷಿಣ ಕನ್ನಡ): ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಗ್ರಾಮದ ಕಾರಣಿಕ ಕೊಂಡಾಣ ಕ್ಷೇತ್ರದಲ್ಲಿ ಪಿಲಿಚಾಮುಂಡಿ ಬಂಟ, ವೈದ್ಯನಾಥ ಪರಿವಾರ ದೈವಗಳ ಕ್ಷೇತ್ರಕ್ಕೆ ತಾಗಿಕೊಂಡು ನೂತನವಾಗಿ ನಿರ್ಮಿಸಿದ್ದ ಭಂಡಾರ ಮನೆಯನ್ನು ಜೆಸಿಬಿಯಿಂದ ಭಾನುವಾರ ನೆಲಸಮಗೊಳಿಸಿರುವ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
"ಸ್ಥಳೀಯ ನಿವಾಸಿಗಳಾದ ಮುತ್ತಣ್ಣ ಶೆಟ್ಟಿ, ಧೀರಜ್ ಮತ್ತು ಶಿವರಾಜ್ ಬಂಧಿತರು. ಈ ಕೃತ್ಯವನ್ನು ತಾವೇ ಎಸಗಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್ ಈ ಬಗ್ಗೆ ದೂರು ನೀಡಿದ್ದು, ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಮುಜರಾಯಿ ಇಲಾಖೆ ಅಧೀನದಲ್ಲಿರುವ ಈ ಕಾರಣಿಕ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ಭಂಡಾರ ಮನೆಯನ್ನು ನೂತನವಾಗಿ ನಿರ್ಮಿಸಲಾಗಿತ್ತು. ಭಾನುವಾರ ಬೆಳಗ್ಗೆ 8 ಗಂಟೆಯ ಬಳಿಕ ಸ್ಥಳಕ್ಕೆ ಜೆಸಿಬಿಯನ್ನು ತಂದ ಅಪರಿಚಿತರು ಭಂಡಾರ ಮನೆಯನ್ನು ನೆಲಸಮಗೊಳಿಸಿದರು" ಎಂದು ಸ್ಥಳೀಯರು ಹೇಳಿದ್ದಾರೆ.
"ಕ್ಷೇತ್ರದ ಹಿಂದಿನ ಭಂಡಾರಮನೆ ಖಾಸಗಿ ಗುತ್ತಿನಮನೆಯ ಒಡೆತನದಲ್ಲಿತ್ತು. ಅದರಲ್ಲಿ ಕ್ಷೇತ್ರದ ದೈವಗಳ ಬೆಲೆಬಾಳುವ ಒಡವೆಗಳಿದ್ದವು. ಭಂಡಾರಮನೆಯನ್ನೂ ಮುಜರಾಯಿ ಇಲಾಖೆಗೆ ಸೇರಿಸಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಪ್ರಯತ್ನಿಸಿದ್ದರು. ಇದಕ್ಕೆ ಗುತ್ತಿನ ಮನೆಯವರ ಸಮ್ಮತಿ ಇರಲಿಲ್ಲ" ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
"ಈ ಕ್ಷೇತ್ರಕ್ಕೆ ಬೇರೆಯೇ ಭಂಡಾರಮನೆ ನಿರ್ಮಿಸಬೇಕು ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿತ್ತು. ಬಳಿಕ ಕ್ಷೇತ್ರದ ಪಕ್ಕದ ಜಮೀನು ಖರೀದಿಸಿ ಅಲ್ಲಿ ನೂತನ ಭಂಡಾರ ಮನೆ ನಿರ್ಮಿಸಲು ಜನವರಿಯಲ್ಲಿ ಶಿಲಾನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದ ಭಂಡಾರದ ಮನೆ ಬಹುತೇಕ ಪೂರ್ಣಗೊಂಡಿತ್ತು. ಕೃಷ್ಣ ಶೆಟ್ಟಿ ತಾಮಾರ್ ಅವರು ಎರಡು ದಿನಗಳ ಹಿಂದಷ್ಟೇ ಆಡಳಿತವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರಿಸಿದ್ದರು. ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ನಿರ್ಮಾಣ ಹಂತದಲ್ಲಿದ್ದ ಭಂಡಾರ ಮನೆಯನ್ನು ನೆಲಸಮಗೊಳಿಸಲಾಗಿದೆ" ಎಂಬ ಮಾಹಿತಿ ಲಭ್ಯವಾಗಿದೆ.
"ಇಲ್ಲಿ ಮತ್ತೆ ನೂತನ ಭಂಡಾರದ ಮನೆಯನ್ನು ನಿರ್ಮಿಸಬೇಕು. ಯಾರು ಇದನ್ನು ಕೆಡವಿದ್ದಾರೋ ಅವರಿಂದಲೇ ಅದರ ವೆಚ್ಚ ಭರಿಸಬೇಕು. ದೈವಗಳ ಬೆಲೆಬಾಳುವ ಒಡವೆಗಳನ್ನು ಲಾಕರ್‌ನಲ್ಲಿ ಭದ್ರವಾಗಿಡುವ ವ್ಯವಸ್ಥೆ ಜಾರಿಯಾಗಬೇಕು" ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
"ದೈವಸ್ಥಾನಕ್ಕೆ 16 ಗುರಿಕಾರರು ಇದ್ದಾರೆ. ಹೊಸ ಭಂಡಾರ ಮನೆ ನಿರ್ಮಿಸುವ ಬಗ್ಗೆ ಎಲ್ಲಾ ಗುರಿಕಾರರ ಸಮ್ಮತಿ ಇರಲಿಲ್ಲ. ಅವರ ಒಪ್ಪಿಗೆ ಇಲ್ಲದೆಯೇ ಹೊಸ ಭಂಡಾರ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಈ ಬಗ್ಗೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಭಂಡಾರ ಮನೆಯನ್ನು ಒಡೆದು ಹಾಕಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ" ಎಂದು ಪೊಲೀಸ್ ಮೂಲಗಳು ಹೇಳಿವೆ.
"ಆರೋಪಿಗಳ ವಿರುದ್ಧ ಅಕ್ರಮ ಕೂಟ ರಚನೆ, ಮಾರಕಾಸ್ತ್ರ ಬಳಸಿ ದಾಂಧಲೆ ಸೃಷ್ಟಿ, ಧಾರ್ಮಿಕ ಸ್ಥಳ ಧ್ವಂಸಗೊಳಿಸಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವುದು, ಸ್ವತ್ತು ನಾಶ ಸಂಬಂಧ ಭಾರತೀಯ ದಂಡ ಸಂಹಿತೆಯ(ಐಪಿಸಿ) ವಿವಿಧ ಸೆಕ್ಷನ್‌ಗಳಡಿ ಹಾಗೂ ಕರ್ನಾಟಕ ಸ್ವತ್ತು ನಾಶ ಮತ್ತು ಆಸ್ತಿ ಹಾನಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್, ಸಹಾಯಕ ಪೊಲೀಸ್ ಕಮಿಷನರ್ ಧನ್ಯಾ ನಾಯಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ-ಯು.ಟಿ.ಖಾದರ್: ಕೊಂಡಾಣ ಕ್ಷೇತ್ರದ ಭಂಡಾರ ಮನೆಯ ನೂತನ ಕಟ್ಟಡ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ. "ಈ ಘಟನೆಯು ಇಡೀ ಜಿಲ್ಲೆಗೆ ಕಪ್ಪು ಚುಕ್ಕೆ. ಇದು ಅತ್ಯಂತ ನೋವಿನ ವಿಚಾರ. ಯಾವುದೇ ರೀತಿಯ ಧಾರ್ಮಿಕ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬನಶಂಕರಿ ದೇವಸ್ಥಾನದಲ್ಲಿ ಭಕ್ತರು ಎಸೆದು ಹೋದ ವಸ್ತುಗಳಿಂದ ಗೊಬ್ಬರ ತಯಾರಿಕೆ