ದಾವಣಗೆರೆ/ವಿಜಯನಗರ: ಪಂಚಪೀಠಗಳಲ್ಲಿ ಒಂದಾದ ನಾಡಿನ ಪ್ರಸಿದ್ಧ ವಿಜಯನಗರ ಜಿಲ್ಲೆಯ ಉಜ್ಜಯಿನಿ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವ ಭಾನುವಾರ ಸಂಜೆ ಸಹಸ್ರಾರು ಸಾವಿರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಸ್ವಾಮಿಯ ಪಟಾಕ್ಷಿಯನ್ನು 2.01 ಲಕ್ಷ ರೂಪಾಯಿ ನೀಡಿ ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ ಪ್ರವೀಣ್ ಎಂಬುವರು ಸವಾಲ್ದಲ್ಲಿ ಪಡೆದುಕೊಂಡರು. ನಂತರ ಶ್ರೀಶೈಲ ಕೊಟ್ರೇಶ್ 80 ಸಾವಿರ ರೂಪಾಯಿಗೆ ಹೂವಿನ ಹಾರ ಸ್ವೀಕರಿಸಿದರು. ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಳೆ ಬೆಳೆ ಸಮೃದ್ಧವಾಗಿ ಆಗಿ ರೈತರ ಬದುಕು ಹಸನಾಗಲಿ. ನಾಡಿನ ಭಕ್ತರಿಗೆ ಮರುಳಸಿದ್ದೇಶ್ವರ ಸ್ವಾಮಿ ಸಕಲ ಸೌಭಾಗ್ಯ ಕಲ್ಪಿಸಿ ಸನ್ಮಂಗಲ ನಿರ್ಮಾಣ ಮಾಡಲಿ ಎಂದು ಆಶೀರ್ವಚನ ನೀಡಿದರು. ರಥೋತ್ಸವಕ್ಕೆ ಭಾನುವಾರ ಸಂಜೆ 6 ಗಂಟೆಗೆ ಚಾಲನೆ ನೀಡಿದರು.
ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ಮೊದಲು ಉತ್ಸವ ಮೂರ್ತಿಯನ್ನು ಕರೆತಂದು ರಥಕ್ಕೆ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾನ ಮಾಡಲಾಯಿತು. ನಂತರ ರಥೋತ್ಸವ ನೆರವೇರಿತು. ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ಜಯ ಘೋಷಣೆ ಕೂಗುತ್ತ ರಥ ಎಳೆದರು.
ರಥವನ್ನು ಪಾದಗಟ್ಟಿಯವರೆಗೆ ಎಳೆದೊಯ್ದರು. ಮತ್ತೆ ಮರಳಿ ಮೂಲಸ್ಥಾನಕ್ಕೆ ರಥೋತ್ಸವ ಎಳೆದು ತಂದು ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದರು. ನಂತರ ಶ್ರೀಮಠಕ್ಕೆ ತಂದು ಮಠದಲ್ಲಿ ಪ್ರತಿಷ್ಠಾಪಿಸಿ ಮೂರ್ತಿಗೆ ಮಂಗಳಾರತಿ ಬೆಳಗಿ ಉತ್ಸವದ ಸಂಭ್ರಮಕ್ಕೆ ವಿರಾಮ ನೀಡಲಾಯಿತು.
ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಧನ್ಯರಾದರು. ಸಮಾಳ, ನಂದಿಕೋಲು ಸೇರಿದಂತೆ ವಿವಿಧ ಮಂಗಲ ವಾದ್ಯಗಳು ರಥೋತ್ಸವಕ್ಕೆ ಮೆರಗು ತಂದವು.
ಇದನ್ನೂಓದಿ:ಚಾಮರಾಜನಗರ: ಮಲೆ ಮಹದೇಶ್ವರನಿಗೆ ಒಂದೂವರೆ ಕೆಜಿ ತೂಕದ ಬೆಳ್ಳಿ ಆರತಿ ತಟ್ಟೆ ಕೊಡುಗೆ - SILVER AARTI PLATE