ಉಡುಪಿ: ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಹಗರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ.
ಅನುಷ್ಠಾನ ಅಧಿಕಾರಿಯಾಗಿ ಅರುಣ್ ಕುಮಾರ್ ಅವರು ಪರಶುರಾಮ ಥೀಂ ಪಾರ್ಕ್ ಕಾಮಗಾರಿ ನಿರ್ವಹಿಸಿದ್ದು, ಈ ಕಾಮಗಾರಿಗೆ ಅಂದಾಜು ಮೊತ್ತ 11.05ಕೋಟಿ ರೂ. ಆಡಳಿತ್ಮಾತಕ ಮಂಜೂರಾತಿಗೊಂಡಿದೆ. ಈ ಪೈಕಿ 6.72 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ಪೂರ್ಣಗೊಳಿಸದೇ, ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರ ಮಾಡದೆ, ಉದ್ಘಾಟನಾ ಕಾರ್ಯಕ್ರಮ ಮಾಡಲಾಗಿದೆ. ಈ ಇದರ ಕಾಮಗಾರಿಯ ಗುಣಮಟ್ಟ ಹಾಗೂ ಧಾರ್ಮಿಕ ಭಾವನೆಗಳಿಗೆ ಅಪಚಾರ ಆಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ.
ಅಲ್ಲದೆ ಈ ಪ್ರಕರಣದ ಬಗ್ಗೆ ಸಿಓಡಿ ಹಾಗೂ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ವಿಚಾರಣಾ ಆಯೋಗ ತನಿಖೆ ನಡೆಸುತ್ತಿವೆ. ಈ ಹಂತದಲ್ಲಿ ತನಿಖೆಗೆ ಅಡಚಣೆ ಆಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಅವರ ಸ್ಥಾನಕ್ಕೆ ನಿರ್ಮಿತಿ ಕೇಂದ್ರದ ಸಹಾಯಕ ಯೋಜನಾ ನಿರ್ದೇಶಕ ದಿವಾಕರ ಪಿ. ಅವರನ್ನು ಹೆಚ್ಚುವರಿ ಪ್ರಭಾರ ನೀಡಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಜು.24ರಂದು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಾಗ್ರೆಸ್ ವಕ್ತಾರ ಶುಭದರಾವ್, "ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿರುವುದು ಸ್ವಾಗತಾರ್ಹ. ಇದು ಸತ್ಯದ ಹೋರಾಟಕ್ಕೆ ಸಂದ ಮೊದಲ ಜಯ." ಎಂದು ಹೇಳಿದರು.
"2022ರ ನವೆಂಬರ್ ತಿಂಗಳಿನಲ್ಲಿ ಮೂರ್ತಿ ರಚನೆಗೆ ಬೆಂಗಳೂರಿನ ಕ್ರಿಸ್ ಆರ್ಟ್ ವರ್ಲ್ಡ್ನ ಕೃಷ್ಣ ನಾಯಕ್ ಎಂಬವರಿಗೆ 1 ಕೋಟಿ ರೂ. ಮುಂಗಡ ಮೊತ್ತ ಪಾವತಿಸಿ, ಬಳಿಕ ಡಿಸೆಂಬರ್ ತಿಂಗಳಿನಲ್ಲಿ ಟೆಂಡರ್ ನಡೆಸಿ, 2023ರ ಜನವರಿ ತಿಂಗಳಿನಲ್ಲಿ ಪ್ರತಿಮೆ ಸ್ಥಾಪಿಸಿ ಎಲ್ಲರಿಂದಲೂ ಮೆಚ್ಚುಗೆ ಗಿಟ್ಟಿಸಿಕೊಂಡ ಅಧಿಕಾರಿಯ ನಿಜ ಬಣ್ಣ ಬಯಲಾಗಿದೆ. ಕಳೆದ ಒಂದು ವರ್ಷದಿಂದ ಈ ಪ್ರತಿಮೆ ನಕಲಿ ಎಂದು ಹೋರಾಟ ನಡೆಸಿದರೂ, ಇದು ಅಸಲಿ ಪ್ರತಿಮೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಸುಳ್ಳು ಪ್ರಕಟಣೆ ನೀಡಲಾಗಿತ್ತು. ಪ್ರವಾಸೋದ್ಯಮ ಸಚಿವರಿಗೂ ಸುಳ್ಳು ಮಾಹಿತಿ ನೀಡಿ, ಪ್ರತಿಮೆ ಸಾಗಾಟಕ್ಕೆ ಸಂಬಂಧಿದಂತೆ ಯಾವುದೇ ದಾಖಲೆಗಳನ್ನು ಇಟ್ಟುಕೊಳ್ಳದೇ ಎಲ್ಲರ ದಾರಿ ತಪ್ಪಿಸಿದರ ಪರಿಣಾಮ ಈ ಶಿಕ್ಷೆಯಾಗಿದೆ." ಎಂದರು.
"ಮುಂದಿನ ದಿನಗಳಲ್ಲಿ ಎಲ್ಲಾ ಸತ್ಯಾಸತ್ಯತೆಗಳು ಬಯಲಿಗೆ ಬರಲಿದ್ದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪರಶುರಾಮ ಥೀಮ್ ಪಾರ್ಕ್ ಯೋಜನೆಗೆ ಬಿಡುಗಡೆಯಾಗಿದ್ದೇ 6 ಕೋಟಿ: ಸಿಎಂಗೆ ಸುನಿಲ್ ಕುಮಾರ್ ಟಾಂಗ್ - V Sunil kumar