ಉಡುಪಿ-ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ 7,32,234 ಲಕ್ಷ ಮತ ಪಡೆದು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ ಪೂಜಾರಿ, "ನನ್ನ ಗೆಲುವಿಗೆ ಸಹಕರಿಸಿದ ಎಲ್ಲಾ ಮತದಾರರಿಗೆ, ದುಡಿದ ಕಾರ್ಯಕರ್ತರಿಗೆ ಧನ್ಯವಾದಗಳು. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಹಂಬಲದಿಂದ ಜನರು ನನಗೆ ಮತ ಹಾಕಿದ್ದಾರೆ. ಎನ್ಡಿಎ ಸ್ಪಷ್ಟ ಬಹುಮತ ಪಡೆಯುವ ನಿರೀಕ್ಷೆಯೊಂದಿಗೆ ಅತಿ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಇತ್ತು. ಎನ್ಡಿಎ 295ರ ಆಸುಪಾಸು ಗೆಲುವು ಪಡೆದಿದೆ. ಈ ಮೂಲಕ ನಿಶ್ಚಯವಾಗಿ ಎನ್ಡಿಎ ಅಧಿಕಾರಕ್ಕೆ ಬರುತ್ತದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ನಾವು ಊಹೆ ಮಾಡಿದ ಪ್ರಮಾಣದಲ್ಲಿ ಗೆಲುವು ಪಡೆದಿಲ್ಲ. ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನ ಗೆಲ್ಲುವ ಭರವಸೆ ಇತ್ತು. ಆದರೆ ಸ್ವಲ್ಪ ಕಡಿಮೆ ಬಂದಿದ್ದೇವೆ. ಭಾರತಕ್ಕಾಗಿ ನರೇಂದ್ರ ಮೋದಿ ಅವರು ತುಂಬಾ ಕೆಲಸ ಮಾಡಿದ್ದಾರೆ. ಬಡವರ ಕಲ್ಯಾಣ ಯೋಜನೆಗಳು ಕೈ ಹಿಡಿದಿವೆ. ಬಹಳ ಬೇಗ ಹಿಂದಿ, ಇಂಗ್ಲಿಷ್ ಕಲಿಯುತ್ತೇನೆಂಬ ವಿಶ್ವಾಸ ಇದೆ" ಎಂದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಜಯಗಳಿಸಿದೆ. ಭಾರಿ ವಿರೋಧದ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆಗೆ ಬಿಜೆಪಿ ಬೇರೆ ಕಡೆ ಟಿಕೆಟ್ ನೀಡಿದ ಪರಿಣಾಮ ಮಾಜಿ ಸಚಿವ , ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ಸಿಕ್ಕಿತು. ಸಂಸದ ಚುನಾವಣೆಗೆ ನಿಂತ ಹೊಸತರಲ್ಲೆ ಅವರು ಗೆಲುವು ದಾಖಲಿಸಿದ್ದಾರೆ.
ಇವಿಎಂ ಮತ್ತು ಅಂಚೆ ಮತಗಳ ಲೆಕ್ಕಾಚಾರ:
ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ- 7,32,234 ಮತಗಳು
ಕಾಂಗ್ರೆಸ್ -ಜಯಪ್ರಕಾಶ್ ಹೆಗ್ಡೆ- 4,73,059 ಮತಗಳು
ಬಿಜೆಪಿ ಗೆಲುವಿನ ಅಂತರ- 2,59,175
ನೋಟಾ- 11,269
ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಇತಿಹಾಸ: ಕಳೆದ ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಸ್ಪರ್ಧಿಸಿದ್ದರು. ಶೋಭಾ 3 ಲಕ್ಷ ಮತಗಳ ಅಂತರದಿಂದ ಭಾರಿ ಜಯ ಸಾಧಿಸಿದ್ದರು.
ಮತದಾರರ ವಿವರ:
ಮಹಿಳೆಯರು: 8,16, 910
ಪುರುಷರು: 7,68, 215
ಇತರ : 37
ಸೇವಾ ಮತದಾರರು: 559
ಒಟ್ಟು ಮತದಾರರು: 15,85,721