ಧಾರವಾಡ : ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಶಿವಸೇನಾ ಮುಖಂಡ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಅಹ್ಮದ್ ಶಾ ಎಂದು ಹೇಳಿದ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ಉದ್ಧವ್ ಠಾಕ್ರೆ ಹತಾಶರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಧಾರವಾಡದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಭಾರತ ಇತಿಹಾಸದಲ್ಲಿ ಪಾಕಿಸ್ತಾನ ಹಾಗೂ ಚೀನಾವನ್ನು ಅತ್ಯಂತ ಗಟ್ಟಿಯಾಗಿ ನಿರ್ವಹಣೆ ಮಾಡಿದ ಸರ್ಕಾರವಿದ್ದರೆ ಅದು ನರೇಂದ್ರ ಮೋದಿ ಸರ್ಕಾರ ಎಂದರು. ಇವರ ಇಂಡಿಯಾ ಹಾಗೂ ಯುಪಿಎ ಕಾಲದಲ್ಲಿ ದೇಶಾದ್ಯಂತ ಭಯೋತ್ಪಾದನೆ ಚಟುವಟಿಕೆಗಳು ನಡೆಯುತ್ತಿದ್ದವು. ಹುಬ್ಬಳ್ಳಿ, ಹೈದರಾಬಾದ್, ಕೋಲ್ಕತ್ತಾ ಸೇರಿ ಹಲವು ಕಡೆ ಬಾಂಬ್ ಬ್ಲಾಸ್ಟ್ ಆಗಿವೆ. ಕಾಶ್ಮೀರದಲ್ಲಿ ಭಯೋತ್ಪಾದಕರು ಬಂದು ಅಟ್ಯಾಕ್ ಮಾಡಿ ಓಡಿ ಹೋಗ್ತಾರೆ. ಉಳಿದಂತೆ ಬಹಳ ದೊಡ್ಡ ಭಯೋತ್ಪಾದನೆ ಎಲ್ಲೂ ನಡೆಯುತ್ತಿಲ್ಲ. ಇದರ ಅರ್ಥ ನಾವು ಕೈಕಟ್ಟಿ ಕುಳಿತಿಲ್ಲ, ಪಾಕಿಸ್ತಾನವನ್ನ ತಹಬದಿಯಲ್ಲಿ ಇಟ್ಟಿದ್ದೇವೆ. ಅಂತಾರಾಷ್ಟ್ರೀಯ ವ್ಯವಸ್ಥೆಗೆ ಅನುಗುಣವಾಗಿ ಒಂದು ಪ್ರಯತ್ನ ಮಾಡಿದ್ದೇವೆ ಎಂದರು.
ಅವರಿಗೆ ಸರಿಯಾದ ಮಾಹಿತಿ ಹೇಳಿ, ತಿಳುವಳಿಕೆ ಹೇಳುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಯಾವಾಗ ಅವರು ಕೇಳಲ್ಲವೋ ನಾವು ಏರ್ ಸ್ಟ್ರೈಕ್ ಮಾಡಿದ್ದೇವೆ. ನಿಮ್ಮ ಕಾಲದಲ್ಲಿ ನೀವು ಏರ್ ಸ್ಟ್ರೈಕ್ ಮಾಡಿದ್ರಾ?. ಠಾಕ್ರೆ ಬಾಲಿಶವಾಗಿ ಮಾತಾಡ್ತಾರೆ. ಹೀಗಾಗಿ ಅವರ ಮಾತಿಗೆ ಏನು ಉತ್ತರ ಕೊಡೋದು ಎಂದು ಪ್ರಶ್ನಿಸಿದರು.
ಸೈನಿಕರ ಮೇಲೆ ಇತ್ತೀಚೆಗೆ ಹೆಚ್ಚು ದಾಳಿ ನಡೆದ ವಿಚಾರವಾಗಿ ಮಾತನಾಡಿ, ಈ ಹಿಂದೆ 10 ವರ್ಷಕ್ಕೆ ಹಾಗೂ ಯುಪಿಎ ಕಾಲಕ್ಕೆ ಇರಬಹುದು. ಬಹಳ ದೊಡ್ಡ ಪ್ರಮಾಣದ ಕಲ್ಲು ತೂರಾಟ ಹಾಗೂ ಭಯೋತ್ಪಾದನೆ ನಿಂತಿದೆ. ಅದನ್ನ ಸಂಪೂರ್ಣವಾಗಿ ನಿಲ್ಲಿಸಲು ನಮ್ಮ ಸರ್ಕಾರ ಬದ್ಧವಿದೆ. ಇಡೀ ದೇಶದಲ್ಲಿ ಭಯೋತ್ಪಾದನೆ ನಿಂತು ಹೋಗಿದೆ ಎಂದರು.
ಮನೆ ಗೋಡೆ ಕುಸಿದು ಸಾವು ; ಮೃತನ ಮನೆಗೆ ಕೇಂದ್ರ ಸಚಿವ ಜೋಶಿ ಭೇಟಿ, ಸಾಂತ್ವನ: ಕಳೆದ ಕೆಲ ದಿನಗಳ ಹಿಂದೆ ಮನೆ ಕುಸಿದು ಸಾವನ್ನಪ್ಪಿದ ಸಂತ್ರಸ್ತರ ಮನೆಗೆ ಸಚಿವ ಜೋಶಿ ಭೇಟಿ ನೀಡಿ ಸಾಂತ್ವನ ಹೇಳಿದರು. ತಾಲೂಕಿನ ವೆಂಕಟಾಪೂರ ಗ್ರಾಮದ ಯಲ್ಲಪ್ಪ ಹಿಪ್ಪಿಯವರು ಪಕ್ಕದ ಮನೆ ಗೋಡೆ ಕುಸಿದು ಮೃತಪಟ್ಟಿದ್ದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಶುಕ್ರವಾರ ಪಕ್ಕದ ಮನೆ ಗೋಡೆ ಕುಸಿದು ಯಲ್ಲಪ್ಪ ನಿಧನರಾಗಿದ್ದರು. ಇದು ಬಹಳ ದುರ್ದೈವದ ಸಂಗತಿ. ಅವರಿಗೆ ಮೂರು ಮಕ್ಕಳಿವೆ, ಹೆಂಡತಿ ಮಕ್ಕಳಿಗೆ ಗಾಯವಾಗಿತ್ತು. ಈಗಾಗಲೇ ಸರ್ಕಾರದಿಂದ 5 ಲಕ್ಷ ಪರಿಹಾರ ನೀಡಿದ್ದೇವೆ. ವಿಧವಾ ವೇತನ ಬರುವ ಹಾಗೆ ಮಾಡಲು ಹೇಳಲಾಗಿದೆ. ಮುಂದೆ ಮನೆ ಬರುವ ಸ್ಕೀಂ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಜಾಸ್ತಿ ಇದ್ದ ಹಿನ್ನೆಲೆ ಮಣ್ಣಿನ ಮನೆಗಳ ಬಗ್ಗೆ ಜಾಗೃತಿ ವಹಿಸಲು ಸೂಚನೆ ಕೊಟ್ಟಿದ್ದೇನೆ. ಮನೆ ಬೀಳುತ್ತಿರುವುದನ್ನು ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಯವರು ಗಮನಿಸಬೇಕು ಎಂದರು.
ಯಡಿಯೂರಪ್ಪ ಇದ್ದ ವೇಳೆಯಲ್ಲಿ ಮಳೆ ಜಾಸ್ತಿ ಇದ್ದಾಗ ಪ್ರತಿ ಮನೆಗೆ 5 ಲಕ್ಷ ಪರಿಹಾರ ನೀಡುತ್ತಿದ್ದರು. ಆದ್ರೆ ಈಗ 1.25 ಲಕ್ಷ NDRF ಪರಿಹಾರ ಇದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣ ಕೊಟ್ಟು ರಾಜ್ಯ ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ. ಇವೆರಡೂ ಭಾರತ ಸರ್ಕಾರದ್ದು ಒಟ್ಟು 2.40 ಲಕ್ಷ ಹಣ ಕೊಡುತ್ತಿದೆ. ಇನ್ನು 2.50 ಲಕ್ಷ ಸರ್ಕಾರದ ಹಣ ಕೊಡಬೇಕೆಂದು ಸಿಎಂಗೆ ಆಗ್ರಹಿಸುತ್ತೇನೆ. ಸರ್ಕಾರ ದಿವಾಳಿಯಾಗಿದೆ. ಮುಂದಾಲೋಚನೆ ಇಲ್ಲದೆ ಗ್ಯಾರಂಟಿ ಕೊಟ್ಟಿದೆ ಎಂದರು.
ಪಾತ್ರೆ ಪಗಡೆ ಕಳೆದುಕೊಂಡವರಿಗೆ ಮೊದಲು 10 ಸಾವಿರ ರೂ. ಕೊಡುತ್ತಿದ್ದರು. ಇದೀಗ ಅದನ್ನು ಕೊಡುತ್ತಿಲ್ಲ. ಗಂಭೀರತೆಯನ್ನ ಕಳೆದುಕೊಂಡಿದೆ. ದಯನೀಯ ಸ್ಥಿತಿಯನ್ನು ಕಾಂಗ್ರೆಸ್ ತಲುಪಿದೆ. ಆದ್ರೂ ಸಹ ದೊಡ್ಡದಾಗಿ ಭಾಷಣ ಮಾಡುತ್ತೀರಿ. ನಾವು ಬಡವರಿಗಾಗಿ ಬಹಳಷ್ಟು ಮಾಡಿದ್ದೇವೆ ಅಂತ ಹೇಳ್ತಿರಿ. ಯಾವುದೇ ಕಾಮಗಾರಿ ಆಗುತ್ತಿಲ್ಲ. ಕೇವಲ 2 ಸಾವಿರ ಕೊಟ್ಟು ಕೈ ತೊಳೆದುಕೊಳ್ಳುತ್ತಿದೆ. ವೃದ್ಧಾಪ್ಯ ವೇತನ ಸೇರಿ ವಿಧವಾ ವೇತನ ಬರುತ್ತಿಲ್ಲ. ಯಾವುದೇ ಪ್ಲಾನಿಂಗ್ ಇಲ್ಲದೆ ಗ್ಯಾರಂಟಿ ತಂದರು. ಈಗ ಅಧಿಕಾರಿಗಳನ್ನು ಕೇಳಿದ್ರೆ ದುಡ್ಡೇ ಇಲ್ಲ ಅಂತ ಹೇಳ್ತಾರೆ ಎಂದು ಜೋಶಿ ಹರಿಹಾಯ್ದರು.
ಇದನ್ನೂ ಓದಿ : ಧಾರವಾಡ: ಟೆಂಟ್ ಮೇಲೆ ಪಕ್ಕದ ಮನೆ ಗೋಡೆ ಕುಸಿತ: ಓರ್ವ ಸಾವು, ಇಬ್ಬರಿಗೆ ಗಾಯ - House Wall Collapse