ಬೆಳಗಾವಿ: ವಿದ್ಯುತ್ ತಗುಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ನಡೆದಿದೆ. ಸುಳೇಭಾವಿ ಗ್ರಾಮದ ಸವಿತಾ ಫಕೀರಪ್ಪ ಒಂಟಿ (34) ಹಾಗೂ ಕಲಾವತಿ ಮಾರುತಿ ಬಿದರವಾಡಿ (41) ಮೃತ ದುರ್ದೈವಿಗಳು.
ಗ್ರಾಮದ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಮಹಿಳಾ ಸಂಘದ ವಾರದ ಸಭೆ ನಡೆಸಿದ ಬಳಿಕ ದೇವಸ್ಥಾನವನ್ನು ಎಲ್ಲ ಮಹಿಳೆಯರು ನೀರಿನಿಂದ ಸ್ವಚ್ಛಗೊಳಿಸಿದ್ದರು. ಇದೇ ವೇಳೆ ನೀರಿನಲ್ಲಿ ವಿದ್ಯುತ್ ತಂತಿ ಕಟ್ ಆಗಿ ಕೆಳಗೆ ಬಿದ್ದಿತ್ತು. ಎಲ್ಲ ಕೆಲಸ ಮುಗಿಸಿ ಹೊರಗೆ ಬರುವಾಗ ಕಬ್ಬಿಣದ ಗೇಟ್ ಹಾಕುವಾಗ ಓರ್ವ ಮಹಿಳೆಗೆ ವಿದ್ಯುತ್ ತಗುಲಿದೆ. ಕೂಡಲೇ ಈಕೆಯನ್ನು ರಕ್ಷಿಸಲು ಹೋದ ಮತ್ತೊಬ್ಬ ಮಹಿಳೆಗೂ ವಿದ್ಯುತ್ ಸ್ಪರ್ಶಿಸಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸವಿತಾ ಒಂಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೋರ್ವ ಮಹಿಳೆ ಕಲಾವತಿ ವಿದರವಾಡಿ ಅವರನ್ನು ತಕ್ಷಣ ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಆಕೆಯೂ ಮೃತಪಟ್ಟಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಚಿವೆ ಹೆಬ್ಬಾಳ್ಕರ್ ತೀವ್ರ ಸಂತಾಪ: ಸುಳೇಬಾವಿಯಲ್ಲಿ ಮಹಿಳೆಯರಿಬ್ಬರು ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ದುರ್ಘಟನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಮಹಿಳೆಯರ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ ವಿರೋಧಿಸಿ ಪಾದಯಾತ್ರೆ: ಜೆಡಿಎಸ್ ಕಾರ್ಯಕರ್ತೆ ಹೃದಯಾಘಾತದಿಂದ ಸಾವು - JDS Worker Died