ಮಂಗಳೂರು: ನಗರದ ಜೈಲಿನಲ್ಲಿ ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಇಬ್ಬರು ವಿಚಾರಣಾಧೀನ ಕೈದಿಗಳಿಗೆ ಗಾಯಗಳಾಗಿವೆ. ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್ (33) ಮುಹಮ್ಮದ್ ಮನ್ಸೂರ್ ಅಲಿಯಾಸ್ ಬೋಳಿಯಾರ್ ಮನ್ಸೂರ್ (30) ಗಾಯಗೊಂಡ ಕೈದಿಗಳು. ಇವರು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 20 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಗಾಯಗೊಂಡವರು, ಪ್ರಸ್ತುತ ವಿವಿಧ ಪ್ರಕರಣಗಳಲ್ಲಿ ಜೈಲಿನಲ್ಲಿರುವ ಪ್ರತಿಸ್ಪರ್ಧಿ ಗ್ಯಾಂಗ್ ಟೋಪಿ ನೌಫಲ್ ಮತ್ತು ಇತರ 10 ಸದಸ್ಯರಾದ ಮುಫದ್ ರಿಫಾತ್, ಮುಹಮ್ಮದ್ ರಿಜ್ವಾನ್, ಇಬ್ರಾಹಿಂ ಕಲ್ಲೆಲ್, ಉಮರ್ ಫಾರೂಕ್ ಇರ್ಫಾನ್, ಅಲ್ತಾಫ್, ನೌಫಲ್ , ಜೈನುದ್ದೀನ್ ಮತ್ತು ಇತರಿಂದ ಹಲ್ಲೆಗೊಳಗಾಗಿದ್ದಾರೆ.
ಇಂದು ಸಂಜೆ 6:30 ರಿಂದ 6:45 ರ ನಡುವೆ ಈ ಘಟನೆ ನಡೆದಿದೆ. ಗಲಾಟೆಯಿಂದ ಇಬ್ಬರ ತಲೆ, ಭುಜ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ. ಅಡುಗೆ ಮನೆಯಲ್ಲಿನ ಚೂಪಾದ ವಸ್ತುಗಳಿಂದ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇಬ್ಬರೂ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.
ಹಲ್ಲೆ ಮಾಡಿದ ಆರೋಪಿಗಳು ಮತ್ತು ಹಲ್ಲೆಗೊಳಗಾದವರು ಅನೇಕ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಾಗೃಹದ ಅಧಿಕಾರಿಗಳ ದೂರಿನ ಮೇರೆಗೆ ಬರ್ಕೆ ಪಿ.ಎಸ್. ಅಪರಾಧ ಕ್ರಮಾಂಕ 56/2024 ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಲು ಕಂಡ ಕಂಡವರ ಮೇಲೆ ಹಲ್ಲೆ ಮಾಡುತ್ತಿದ್ದವನ ಕೊಲೆ: ನಾಲ್ವರು ಆರೋಪಿಗಳು ಅಂದರ್ - MURDER CASE