ಕಲಬುರಗಿ: ಭೀಮಾ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಲು ನದಿಗೆ ಧುಮುಕಿದ್ದ ಆಕೆಯ ಪತಿ ಸೇರಿ ಇಬ್ಬರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಭೀಮಾ ನದಿಯಲ್ಲಿ ನಡೆದಿದೆ.
ಸೊನ್ನ ಗ್ರಾಮದ ಲಕ್ಷ್ಮಿ ಕಣ್ಣಿ ನದಿಗೆ ಜಿಗಿದಿದ್ದು ಆಕೆಯನ್ನು ಮೀನುಗಾರರು ರಕ್ಷಿಸಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈಕೆಯನ್ನು ರಕ್ಷಣೆ ಮಾಡಲು ನದಿಗೆ ಧುಮುಕಿದ್ದ ಗಂಡ ಶಿವಕುಮಾರ ಕಣ್ಣಿ (36) ಹಾಗೂ ಸಂಬಂಧಿ ರಾಜು ಅಂಕಲಗಿ (39) ಸಾವನ್ನಪ್ಪಿದ್ದಾರೆ. ಇವರ ಪೈಕಿ ನದಿಗೆ ಹಾರಿದ್ದ ಇಬ್ಬರು ಈಜಿ ದಡ ಸೇರಿದ್ದಾರೆ.
ಗಂಡ ಶಿವಕುಮಾರ ಕಣ್ಣಿ, ಸಂಬಂಧಿ ರಾಜು ಅಂಕಲಗಿ ನೀರಿನ ರಭಸಕ್ಕೆ ಸಿಕ್ಕಿ ದಡಕ್ಕೆ ಬರಲು ಆಗದೆ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದರು. ಅಗ್ನಿ ಶಾಮಕ ದಳದ ಸಿಬ್ಬಂದಿ ಬ್ಯಾರೇಜ್ ಗೇಟ್ ಹಾಕಿ ಶೋಧ ಕಾರ್ಯ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಕತ್ತಲಾದ್ದರಿಂದ ರಾತ್ರಿ ಕಾರ್ಯಾಚರಣೆ ಕೈಬಿಟ್ಟು ಬುಧವಾರ ಬೆಳಗಿನಿಂದ ಪುನಃ ಕಾರ್ಯಾಚರಣೆ ಆರಂಭಿಸಿದ್ದರು. ಇಂದು ಬೆಳಗ್ಗೆ 6:30ರ ಸುಮಾರಿಗೆ ಸೊನ್ನ ಗ್ರಾಮದ ಬಳಿ ಇಬ್ಬರ ಮೃತದೇಹಗಳು ಪತ್ತೆ ಆಗಿವೆ. ಮೃತದೇಹ ಹೊರತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪತಿ ಹಾಗೂ ಸಂಬಂಧಿ ಇಬ್ಬರು ನೀರಿನಲ್ಲಿ ಮುಳುಗುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಆಗಿವೆ. ಸ್ಥಳಕ್ಕೆ ಎಸ್ಪಿ ಆಡೂರು ಶ್ರೀನಿವಾಸಲು ಭೇಟಿ ನೀಡಿ ಪರೀಶಿಲನೆ ಮಾಡಿದರು. ಈ ಕುರಿತು ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.