ಬೆಂಗಳೂರು : ಪ್ರಯಾಣಿಕರ ಸೋಗಿನಲ್ಲಿ ಹಸುಗೂಸುಗಳನ್ನು ಕರೆದೊಯ್ದು, ಸಹ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ರೈಲಿನಲ್ಲಿ ಮಹಿಳೆಯರ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಅಂತಾರಾಜ್ಯ ಮಹಿಳೆಯರನ್ನು ರೈಲ್ವೆೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆೆಯ ಗಾಯಿತ್ರಿ ಅಲಿಯಾಸ್ ರೂಪಾ(38) ಮತ್ತು ಸಂಧ್ಯಾ ಅಲಿಯಾಸ್ ಶರಣ್ಯಾ (25) ಬಂಧಿತರು. ಆರೋಪಿಗಳಿಂದ 402 ಗ್ರಾ ಚಿನ್ನಾಭರಣ ವಶಕ್ಕೆೆ ಪಡೆಯಲಾಗಿದೆ. ಬಂಧಿತರು ಜನವರಿಯಲ್ಲಿ ಮುರುಡೇಶ್ವರ - ಬೆಂಗಳೂರು ಎಕ್ಸ್ ಪ್ರೆೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶಮೀಮ್ ಕುನೀಲ್ ಎಂಬವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ಮಂಗಳೂರು ರೈಲ್ವೆೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆೆಲೆಯಲ್ಲಿ ಮಂಗಳೂರು ಮತ್ತು ಮೈಸೂರು ರೈಲ್ವೆೆ ಪೊಲೀಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಈ ಹಿಂದೆ ನಗರದ ಆರು ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿದ್ದು, ಜೈಲಿಗೂ ಹೋಗಿದ್ದರು. 2014 ರಿಂದ ಕಳವು ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ರೈಲ್ವೆೆ ಪೊಲೀಸ್ ವಿಭಾಗ ಎಸ್ಪಿ ಡಾ ಸೌಮ್ಯಲತಾ ತಿಳಿಸಿದ್ದಾರೆ.
ಆರೋಪಿಗಳು ಕೆಲವೊಮ್ಮೆ ರೈಲು ಟಿಕೆಟ್ ಬುಕ್ ಮಾಡಿಕೊಂಡರೆ, ಇನ್ನು ಕೆಲವೊಮ್ಮೆ ಯಾವುದೇ ಟಿಕೆಟ್ ಖರೀದಿಸದೇ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆೆ ಟಿಕೆಟ್ ಪರಿಶೀಲನಾ ಅಧಿಕಾರಿ ಪ್ರಶ್ನಿಸಿದಾಗ ಇಲ್ಲದ ಸಬೂಬುಗಳನ್ನು ಹೇಳಿ, ಕಂಕುಳಲ್ಲಿನ ಮಗು ತೋರಿಸಿ ಯಾಮಾರಿಸುತ್ತಿದ್ದರು.
ಜನಸಂದಣಿ ಇರುವ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳ ಪೈಕಿ ಒಬ್ಬಳು ಪ್ರಯಾಣಿಕರ ಗಮನ ಬೇರೆಡೆ ಸೆಳೆದರೆ, ಮತ್ತೊಬ್ಬಳು ಮಹಿಳೆಯರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ದೋಚುತ್ತಿದ್ದಳು. ಬಳಿಕ ಇಬ್ಬರು ಸ್ಥಳದಿಂದ ಪರಾರಿಯಾಗುತ್ತಿದ್ದರು. ಕೃತ್ಯ ಎಸಗಲು ಬೇಸಿಗೆ ರಜೆ ಅಥವಾ ಜನಸಂದಣಿ ಹೆಚ್ಚಿರುವ ಸಂದರ್ಭವನ್ನೇ ಆಯ್ಕೆ ಮಾಡಿಕೊಂಡು ರೈಲಿನಲ್ಲಿ ಪ್ರಯಾಣಿಸಿ ಕೃತ್ಯ ಎಸಗುತ್ತಿದ್ದರು ಎಂದು ಎಸ್ಪಿ ಸೌಮ್ಯಲತಾ ಹೇಳಿದರು.
ಇದನ್ನೂ ಓದಿ : ಬೆಂಗಳೂರು: ವಿಮಾನದಲ್ಲಿ ಬಂದು ಪಿಜಿಗಳಲ್ಲಿ ಲ್ಯಾಪ್ಟಾಪ್ ಎಗರಿಸುತ್ತಿದ್ದ ಬಿ.ಟೆಕ್ ಪದವೀಧರೆ ಸೆರೆ - B Tech graduate arrested