ಮಂಗಳೂರು: ತುಂಡಾದ ವಿದ್ಯುತ್ ತಂತಿ ಸ್ಪರ್ಶದಿಂದ ಇಬ್ಬರು ರಿಕ್ಷಾ ಚಾಲಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ನಗರದ ರೊಸಾರಿಯೊ ಶಾಲೆಯ ಬಳಿ ನಡೆದಿದೆ. ರಾಜು ಮತ್ತು ದೇವರಾಜು ಎಂಬುವರೇ ಮೃತರು ಎಂದು ಗುರುತಿಸಲಾಗಿದೆ.
ಜೂನ್ 27ರಂದು ಬೆಳಗ್ಗೆ 4.30ರ ಸುಮಾರಿಗೆ ರಿಕ್ಷಾ ಸ್ವಚ್ಚಗೊಳಿಸಲೆಂದು ಹೊರ ಬಂದಿದ್ದರು. ಆಗ ರಿಕ್ಷಾ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಆತ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರು. ಮತ್ತೋರ್ವ ಗೋಣಿ ಚೀಲ ಹಿಡಿದು ರಕ್ಷಣೆಗೆ ಮುಂದಾಗಿದ್ದು, ಆತನೂ ವಿದ್ಯುತ್ ಅಘಾತಕ್ಕೆ ಒಳಗಾಗಿದ್ದಾನೆ. ಎರಡೂ ಮೃತದೇಹಗಳನ್ನು ವೆನ್‌ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಮೃತರಿಬ್ಬರಲ್ಲಿ ಒಬ್ಬರು ಪುತ್ತೂರು ಹಾಗೂ ಇನ್ನೊಬ್ಬರು ಹಾಸನದ ಸಕಲೇಶಪುರದವರು. ಇಬ್ಬರೂ ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿಯ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್, ತುಂಡಾದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಶಂಕೆ ಇದೆ. ಈ ಪ್ರದೇಶದ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉಳ್ಳಾಲ ಮನೆ ಕುಸಿದ ಸ್ಥಳಕ್ಕೆ ಸಚಿವ ಕೃಷ್ಣ ಬೈರೇಗೌಡ ಭೇಟಿ: ಅಪಾಯಕಾರಿ ಪಾಯಿಂಟ್ ಸರ್ವೆಗೆ ಸೂಚನೆ