ಮಂಗಳೂರು: ನಗರದ ಜೈಲುರಸ್ತೆಯ ಸಿ.ಜೆ. ಕಾಮತ್ ರಸ್ತೆಯಲ್ಲಿ ಹಳೆಯ ಮನೆಯೊಂದನ್ನು ಕೆಡವುತ್ತಿದ್ದ ವೇಳೆ ಏಕಾಏಕಿ ಗೋಡೆ ಸಹಿತ ಲಿಂಟಲ್ ಕುಸಿದುಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಸೋದರ ಸಂಬಂಧಿಗಳಾದ ಜೇಮ್ಸ್ ಹಾಗೂ ಅಡ್ವಿನ್ ಸಾವನ್ನಪ್ಪಿದವರು.
ಜೇಮ್ಸ್ ಬಹರೈನ್‌ನಲ್ಲಿದ್ದು, ಅವರ ಕುಟುಂಬ ಬಲ್ಮಠದಲ್ಲಿ ಫ್ಲ್ಯಾಟ್‌ವೊಂದರಲ್ಲಿ ವಾಸವಿತ್ತು. ಸಿ.ಜೆ. ಕಾಮತ್ ರಸ್ತೆಯಲ್ಲಿರುವ ತಮ್ಮ ಹಳೇ ಮನೆಯನ್ನು ಕೆಡವಿ, ಹೊಸ ಮನೆ ನಿರ್ಮಾಣದ ಉದ್ದೇಶ ಹೊಂದಿದ್ದರು. ಅದಕ್ಕಾಗಿಯೇ ಅವರು ಬಹರೈನ್‌ನಿಂದ ಆಗಮಿಸಿದ್ದರು.
ಅದರಂತೆ ಗುರುವಾರ ಬೆಳಗ್ಗೆ ಹಳೆಯ ಮನೆಯನ್ನು ಜೆಸಿಬಿಯಿಂದ ಕೆಡವಲಾಗುತ್ತಿತ್ತು. ಈ ವೇಳೆ ಜೇಮ್ಸ್ ಅಲ್ಲಿಯೇ ನಿಂತು, ಜೆಸಿಬಿ ಕೆಲವನ್ನು ವೀಕ್ಷಿಸುತ್ತಿದ್ದರು. ಈ ವೇಳೆ, ಅಲ್ಲಿಯೇ ಪಕ್ಕದ ಮನೆಯಲ್ಲಿರುವ ಜೇಮ್ಸ್ ಸೋದರ ಸಂಬಂಧಿ ಅಡ್ವಿನ್ ಕೂಡ ಅಲ್ಲಿಗೆ ಆಗಮಿಸಿದ್ದು, ಇಬ್ಬರೂ ನಿಂತು ಮಾತನಾಡುತ್ತಿದ್ದರು. ಬೆಳಗ್ಗೆ 10.30ರ ವೇಳೆಗೆ ಜೆಸಿಬಿ ಕಾಮಗಾರಿ ನಡೆಯುತ್ತಿರುವಾಗ ಏಕಾಏಕಿ ಮನೆಯ ಗೋಡೆಯು ಲಿಂಟಲ್ ಸಹಿತ ಕುಸಿದು, ಅಲ್ಲಿಯೇ ನಿಂತಿದ್ದ ಜೇಮ್ಸ್ ಹಾಗೂ ಅಡ್ವಿನ್ ಅವರ ಮೇಲೆಯೇ ಬಿದ್ದಿದೆ. ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮನೆ ಕಟ್ಟಲು ಬಹರೈನ್‌ನಿಂದ ಬಂದಿದ್ದರು: ಜೇಮ್ಸ್ ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ವಾಸವಾಗಿದ್ದರು. ಪೂರ್ವಜರ ಕಾಲದ ಮನೆಯು ತೀರ ಹಳೆಯದಾಗಿ ಶಿಥಿಲವಾಗಿದ್ದರಿಂದ ನಗರದ ಜ್ಯೋತಿಯಲ್ಲಿ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಪತ್ನಿ, ಪುತ್ರಿ ಫ್ಲಾಟ್‌ನಲ್ಲಿದ್ದರೆ, ಜೇಮ್ಸ್ ಬಹರೈನ್‌ನಲ್ಲಿ ಉದ್ಯೋಗದಲ್ಲಿದ್ದರು. ಮನೆ ಕೆಡವಿ ಹೊಸ ಮನೆ ಕಟ್ಟಲೆಂದೇ ಅವರು ರಜೆ ಹಾಕಿ ಊರಿಗೆ ಮರಳಿದ್ದರು.
ಹೊಸ ಮನೆಯ ಕನಸು ಕಾಣುತ್ತಿದ್ದಾಗಲೇ ಜೇಮ್ಸ್ ಅವರ ಅನಿರೀಕ್ಷಿತ ಸಾವು ಕುಟುಂಬವನ್ನು ಕಂಗೆಡಿಸಿದೆ. ಮೃತ ಅಡ್ವಿನ್ ಹೆರಾಲ್ಡ್ ಮಾಬೆನ್ ವಿವಾಹಿತರಾಗಿ ವಿಚ್ಛೇದನ ಪಡೆದುಕೊಂಡಿದ್ದು, ತಮ್ಮ ಸಂಬಂಧಿಕರೊಂದಿಗೆ ವಾಸವಾಗಿದ್ದರು.
ಕೆಡಹುವಲ್ಲಿ ಬರಬೇಡಿ ಎಂದಿದ್ದರು: ಮನೆ ಕೆಡಹುವಾಗ ಅವಘಡ ಸಂಭವಿಸದಿರಲೆಂಬ ಮುನ್ನೆಚ್ಚರಿಕೆಯಿಂದ ಜೆಸಿಬಿ ಆಪರೇಟರ್, ಸ್ಥಳದಲ್ಲಿ ನಿಲ್ಲದಂತೆ ಜೇಮ್ಸ್ ಅವರಿಗೆ ತಿಳಿಸಿದ್ದರು. ಆದರೆ, ದುರದೃಷ್ಟವಶಾತ್ ಜೇಮ್ಸ್ ಆ ಕಡೆ ತೆರಳಿದ್ದಾಗಲೇ ಲಿಂಟಲ್ ಕುಸಿದು ಬಿದ್ದು ಅನಾಹುತ ನಡೆದುಹೋಗಿದೆ. ಬೆಳಗ್ಗೆ 10.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದರೂ ಮಧ್ಯಾಹ್ನದವರೆಗೆ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಕದ್ರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.