ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ರಂಗನಾಥಪುರದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಗೃಹಿಣಿಯ ಶವ ಪತ್ತೆಯಾಗಿದೆ. ಕುತ್ತಿಗೆಗೆ ಸೀರೆ ಬಿಗಿದ ಸ್ಥಿತಿಯಲ್ಲಿ ನೇತ್ರಾವತಿ (34) ಎಂಬ ಮಹಿಳೆ ಸಾವಿಗೀಡಾಗಿದ್ದಾರೆ. ಪತ್ನಿಯನ್ನು ಹತ್ಯೆಗೈದ ಆರೋಪದಡಿ ಪತಿ ವೆಂಕಟೇಶ ಎಂಬಾತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಗಡಿಯ ಗೇರುಪುರ ಮೂಲದ ದಂಪತಿ ನಾಲ್ಕು ವರ್ಷಗಳಿಂದ ರಂಗನಾಥಪುರದಲ್ಲಿ ವಾಸವಿದ್ದರು. ಇವರಿಗೆ 9 ವರ್ಷದ ಗಂಡು ಮಗನಿದ್ದಾನೆ. ವೆಂಕಟೇಶ್ ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ನೇತ್ರಾವತಿ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದನು. ನಿತ್ಯ ಮದ್ಯಪಾನ ಮಾಡಿ ಮನೆೆಗೆ ಬಂದು ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ ವೆಂಕಟೇಶನಿಗೆ ಸಂಬಂಧಿಕರು ಬುದ್ದಿವಾದ ಹೇಳಿದ್ದರು. ಆದರೂ ಸಹ ಖರ್ಚಿಗೆ ಹಣಕ್ಕಾಗಿ ಪತ್ನಿಯ ಬಳಿಯಿದ್ದ ಒಡವೆಗಳನ್ನು ನೀಡುವಂತೆ ಪೀಡಿಸುತ್ತಿದ್ದನು. ಇದೇ ಕಾರಣಕ್ಕಾಗಿ ಎರಡು ದಿನಗಳ ಹಿಂದೆಯೂ ಗಲಾಟೆಯಾಗಿತ್ತು. ಶನಿವಾರ ರಾತ್ರಿ ಕುಡಿದು ಬಂದು ಗಲಾಟೆ ಮಾಡಿದ್ದ ವೆಂಕಟೇಶ್, ಪತ್ನಿ ಉಸಿರುಗಟ್ಟಿಸಿ ಹತ್ಯೆಗೈದು ಬಳಿಕ ತಲೆಮರೆಸಿಕೊಂಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೃತ್ಯದ ಬಳಿಕ ಬಸ್ ನಿಲ್ದಾಣದ ಬಳಿಯಿದ್ದ ವೆಂಕಟೇಶನನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ನಿರ್ಮಾಣ ಹಂತದ ಕಟ್ಟಡದ ಸಮೀಪ ವ್ಯಕ್ತಿಯ ಶವ ಪತ್ತೆ: ನಿರ್ಮಾಣ ಹಂತದ ಕಟ್ಟಡದ ಬಳಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾಯಚೂರು ಮೂಲದ ವೀರೇಶ್ (27) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
80 ಅಡಿ ರಸ್ತೆ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಇಂದು ಬೆಳಗ್ಗೆ ಶವ ಪತ್ತೆಯಾಗಿದೆ. ಸ್ಥಳಕ್ಕೆ ಕೋಣನಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾರೆ ಕೆಲಸ ಮಾಡಿಕೊಂಡಿದ್ದ ವೀರೇಶ್, ಕೋಣನಕುಂಟೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದ. ಮೃತನ ಸಹೋದ್ಯೋಗಿಗಳ ವಿಚಾರಣೆ ಮಾಡಲಾಗುತ್ತಿದೆ. ಸಂಬಂಧಿಕರಿಂದ ದೂರು ಪಡೆದುಕೊಂಡ ಪೊಲೀಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ವೈದ್ಯಕೀಯ ವರದಿ ಬಂದ ನಂತರ ಸಾವಿಗೆ ಕಾರಣ ತಿಳಿಯಲಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲ್ಸಾರ್ ತಿಳಿಸಿದ್ದಾರೆ.
ವಿದ್ಯುತ್ ತಗುಲಿ ಕಾರ್ಮಿಕ ಸಾವು: ಮೆಣಸು ಕೊಯ್ಯುವಾಗ ಏಣಿಗೆ ಹೈಟೆನ್ಶನ್ ತಂತಿ ತಗುಲಿ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೊಡ್ಡಸಾಲವರ ಗ್ರಾಮದಲ್ಲಿ ನಡೆದಿದೆ.
ಕಾಸರಗೋಡಿನ ಮಂಜೇಶ್ವರ ಮೂಲದ ಸಮೀರ್ (32) ಮೃತ ವ್ಯಕ್ತಿ. ಬೇಲೂರು ತಾಲೂಕಿನ ದೊಡ್ಡ ಸಾಲವರ ಗ್ರಾಮದ ಹುಕುಂ ಚಂದ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಮೀರ್, ಮೆಣಸು ಕೊಯ್ಯಲು ಮುಂದಾಗಿ, ತಾನು ತಂದಿದ್ದ ಅಲ್ಯೂಮಿನಿಯಂ ಏಣಿಗೆ ಮೇಲೆ ಕಾಲಿಟ್ಟು ಮರ ಹತ್ತಲು ಮುಂದಾಗಿದ್ದನು. ಈ ವೇಳೆ ಮರದ ಸಮೀಪವಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗೆ ಕ್ಯಾಂಟರ್ ವಾಹನ ಡಿಕ್ಕಿ; ರೈತ ಸಾವು - Road Accident