ಮೈಸೂರು: ಕೆಲವು ಕಿಡಿಗೇಡಿಗಳು ಕೃಷಿ ಭೂಮಿಯನ್ನು ಉತ್ತಿ ಬಿತ್ತಿ ಬೆಳೆ ತೆಗೆದು ಸ್ವಾಭಿಮಾನಿಯಾಗಿ ಬದುಕು ರೂಪಿಸಿಕೊಳ್ಳುತ್ತಿದ್ದ ರೈತನ ಬದುಕಿಗೆ ಕೊಳ್ಳಿಯಿಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಿಂಧುವಳ್ಳಿಪುರ ಗ್ರಾಮದ ರೈತ ಸಿದ್ದರಾಜು ಎಂಬವರು ಹೊಸಹಳ್ಳಿ ಗ್ರಾಮದಲ್ಲಿ ಜೋಡೆತ್ತುಗಳಿಂದ ಗದ್ದೆ ಕೆಲಸ ಮುಗಿಸಿಕೊಂಡು ಸಂಜೆ ಸ್ವಗ್ರಾಮಕ್ಕೆ ತೆರಳಲು ಮುಂದಾಗಿದ್ದರು. ಆದರೆ ಅದು ಸಾಧ್ಯವಾಗದ ಕಾರಣ ಹೊಸಹಳ್ಳಿ ಗ್ರಾಮದಲ್ಲಿಯೇ ಜೋಡೆತ್ತುಗಳನ್ನು ಸಾಕಮ್ಮ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಉಳಿದುಕೊಂಡಿದ್ದರು. ಮಧ್ಯರಾತ್ರಿ ಕಿಡಿಗೇಡಿಗಳು ಜೋಡೆತ್ತುಗಳಿದ್ದ ಕೊಟ್ಟಿಗೆಗೆ ಬೆಂಕಿ ಇಟ್ಟಿದ್ದಾರೆ. ಜೋಡೆತ್ತುಗಳು ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ.
ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ರೈತ ಸಿದ್ಧರಾಜು ದೂರು ನೀಡಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ರೌಡಿಶೀಟರ್ ಗ್ಯಾಂಗ್ಗಳ ನಡುವೆ ಹೊಡೆದಾಟ: ಆರೋಪಿ ಬಂಧನ ವೇಳೆ ಪೊಲೀಸ್ ಫೈರಿಂಗ್ - Police Firing