ನೆಲಮಂಗಲ (ಬೆಂಗಳೂರು ಗ್ರಾಮಾಂತರ): ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಲು ಅಣ್ಣ, ತಮ್ಮಂದಿರ ನಡುವೆ ಪೈಪೋಟಿ ನಡೆದಿದೆ. ಮಹಿಳೆ ಜೊತೆಗಿನ ಸಂಬಂಧಕ್ಕಾಗಿ ಸಹೋದರಿಬ್ಬರ ಮಧ್ಯೆ ಜಗಳ ನಡೆದು ಕೊಲೆಯಲ್ಲಿ ಅಂತ್ಯ ಕಂಡಿರುವ ನೆಲಮಂಗಲ ತಾಲೂಕಿನ ಎಲೆಕ್ಯಾತನಹಳ್ಳಿಯಲ್ಲಿ ಘಟನೆ ಜರುಗಿದೆ. ಈ ವೇಳೆ ಕಿರಿಯ ಸಹೋದರನು ಅಣ್ಣನ ಕೊಲೆ ಮಾಡಿ ನಂತರ, ಆಂಬ್ಯುಲೆನ್ಸ್ ಕರೆ ಮಾಡಿ ಪರಾರಿಯಾಗಿದ್ದ.
ತಾಲೂಕಿನ ಮರಳುಕುಂಟೆ ಗ್ರಾಮದ ನಾಗೇಶ್ (25) ಕೊಲೆ ಆಗಿರುವ ಯುವಕ. ನವೀನ್ (22) ಕೊಲೆ ಮಾಡಿರುವ ಆರೋಪಿ. ಘಟನೆ ನಂತರ ಪರಾರಿಯಾಗಿದ್ದ ಆರೋಪಿಯನ್ನು ದಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಮರಳುಕುಂಟೆ ಗ್ರಾಮದ ನಾಗೇಶ್ ಮತ್ತು ನವೀನ್ ದೊಡ್ಡಪ್ಪ- ಚಿಕ್ಕಪ್ಪನ ಮಕ್ಕಳು, ಇಬ್ಬರು ಬೇರೆ ಬೇರೆ ಖಾಸಗಿ ಕಂಪನಿಯ ಉದ್ಯೋಗಿಗಳು. ಎಲೆಕ್ಯಾತನಹಳ್ಳಿಯ ವಿವಾಹಿತ ಮಹಿಳೆ ಇಬ್ಬರಿಗೂ ಪರಿಚಯಸ್ಥೆ. ಆಕೆಯ ಜೊತೆ ಅಕ್ರಮ ಸಂಬಂಧ ಬೆಳೆಸಲು ಇಬ್ಬರು ಪೈಪೋಟಿ ನಡೆಸಿದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಸಹ ಆಗಿತ್ತು.
ಗುರುವಾರ ರಾತ್ರಿ 8 ಗಂಟೆ ಆರೋಪಿ ನವೀನ್ ನಾಗೇಶ್ಗೆ ಪೋನ್ ಮಾಡಿ ಎಲೆಕ್ಯಾತನಹಳ್ಳಿಗೆ ಬರುವಂತೆ ಕರೆಸಿಕೊಂಡಿದ್ದಾನೆ. ಇಬ್ಬರು ಪಾನಮತ್ತರಾಗಿ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ನವೀನ್ ಮಾರಕಾಸ್ತ್ರದಿಂದ ನಾಗೇಶ್ ಎದೆಗೆ ಚುಚ್ಚಿದ್ದಾನೆ. ಆನಂತರ ಆಂಬ್ಯುಲೆನ್ಸ್ಗೆ ಕರೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆಂಬ್ಯುಲೆನ್ಸ್ ಸ್ಥಳಕ್ಕೆ ಬರುವಷ್ಟರಲ್ಲಿ ನಾಗೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದ.
ಪರಾರಿಯಾಗಿದ್ದ ಆರೋಪಿಯನ್ನು ದಾಬಸ್ ಪೇಟೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲಿಸಿದರು. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿ ಪೊಲೀಸರ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ: 1.10 ಕೋಟಿ ನಗದು ಜಪ್ತಿ - 1 Crore 10 Lakh money seized