ತುಮಕೂರು: ತಿಪಟೂರು ತಾಲೂಕಿನ ಹುಚ್ಚನಹಟ್ಟಿ ಗ್ರಾಮದ ಸಮೀಪ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಗುಂಡಿಯಲ್ಲಿ ಕಾಣೆಯಾಗಿದ್ದ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಎರಡನೇ ತರಗತಿ ಮತ್ತು ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕರು ಮೃತರೆಂದು ತಿಳಿದು ಬಂದಿದೆ.
ಇಬ್ಬರೂ ನಿನ್ನೆ ಸಂಜೆ 7 ಗಂಟೆಯಿಂದ ಕಾಣೆಯಾಗಿದ್ದರು. ಇಂದು ಬೆಳಗ್ಗೆ ಎತ್ತಿನಹೊಳೆ ಕಾಮಗಾರಿ ಮಾಡುತ್ತಿರುವ ಗುಂಡಿಯಲ್ಲಿ ಶವಗಳು ಸಿಕ್ಕಿವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ಕುಟುಂಬದವರು ಸ್ಥಳದಲ್ಲಿಯೇ ಶವಗಳನ್ನಿಟ್ಟು ಪ್ರತಿಭಟಿಸಿ, ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಪಟೂರು ಗ್ರಾಮಾಂತರ ಕ್ಷೇತ್ರದ ಹುಚ್ಚನಹಟ್ಟಿ ಗ್ರಾಮದ ಪಕ್ಕದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಯ ಗುಂಡಿಯಲ್ಲಿ ಬಿದ್ದು ಇಬ್ಬರು ಮಕ್ಕಳು ನಾಪತ್ತೆಯಾಗಿರುವ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಮಕ್ಕಳು ಗುರುವಾರ ಸಂಜೆ ಶಾಲೆ ಮುಗಿದ ಬಳಿಕ ಆಟ ಆಡಲೆಂದು ಇಲ್ಲಿಗೆ ಬಂದಿದ್ದರು. ಆಗಿನಿಂದ ನಾಪತ್ತೆಯಾಗಿರುವುದಾಗಿ ದೂರು ನೀಡಲಾಗಿತ್ತು. ಇಂದು (ಶುಕ್ರವಾರ) ಬೆಳಗ್ಗೆ ಗುಂಡಿಯಲ್ಲಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ ಎಂಬ ಮಾಹಿತಿ ಬಂದಿತು. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಆ ಬಳಿಕ ಅವರ ಗುರುತು ಪತ್ತೆ ಮಾಡಿ ಮರಣೋತ್ತರ ಪರೀಕ್ಷೆಗೆ ಕಳಿಸಿಕೊಡಲಾಯಿತು. 8 ವರ್ಷದ ಯದುವೀರ್ ಮತ್ತು 9 ವರ್ಷದ ಮನೋಹರ್ ಮೃತ ಮಕ್ಕಳೆಂದು ಗುರುತಿಸಲಾಗಿದೆ. ಸದ್ಯ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಅಶೋಕ್ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಇದನ್ನೂ ಓದಿ: ಬೆಂಗಳೂರು: ಅಪಹರಣಗೊಂಡ ಹೆಣ್ಣುಮಗು ದೇವಯ್ಯ ಪಾರ್ಕ್ನಲ್ಲಿ ಪತ್ತೆ