ಬೆಂಗಳೂರು : ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದಾಗಿ ಆರೋಪಿಸಿ ಬಿಲ್ಡರ್ಗಳನ್ನು ಬೆದರಿಸಿ ಲಕ್ಷ-ಲಕ್ಷ ಹಣ ನೀಡುವಂತೆ ಬೆದರಿಸುತ್ತಿದ್ದ ರೌಡಿಶೀಟರ್ ಹಾಗೂ ನಕಲಿ ಆರ್ಟಿಐ ಕಾರ್ಯಕರ್ತನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ತಾವರಕೆರೆ ಠಾಣೆ ವ್ಯಾಪ್ತಿಯ ರೌಡಿಶೀಟರ್ ರಕ್ಷಿತ್ (26) ಹಾಗೂ ಜೈಹಿಂದ್ ಸಂಘಟನೆಯ ಅಧ್ಯಕ್ಷ ರಾಘವ ಗೌಡ ಬಂಧಿತ ಆರೋಪಿಗಳಾಗಿದ್ದಾರೆ. ರಕ್ಷಿತ್ ಹಾಗೂ ರಾಘವಗೌಡ ಇಬ್ಬರು ತಾವರಕೆರೆ ಮೂಲದವರಾಗಿದ್ದಾರೆ. ಅಕ್ರಮವಾಗಿ ಹಣ ಸಂಪಾದನೆ ಮಾಡಲು ರಾಘವಗೌಡ, ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ದೊಡ್ಡ ದೊಡ್ಡ ಭೂ ವೆಂಚರ್ಸ್ಗಳಿಗೆ ತೆರಳಿ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಕಾನೂನು ಉಲ್ಲಂಘಿಸುತ್ತಿದ್ದೀರಾ ಎಂದು ಹೆದರಿಸಿ ಅವರಿಂದ ಹಣ ವಸೂಲಿಗೆ ಇಳಿದಿದ್ದರು.
ಇದೇ ರೀತಿ ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರೋಡ್ನಲ್ಲಿರುವ ಬಿಂದು ವೆಂಚರ್ಸ್ ಮಾಲೀಕರ ಬಳಿ ರೌಡಿಶೀಟರ್ನನ್ನು ಕರೆದೊಯ್ದು ತಾನು ಆರ್ಟಿಐ ಕಾರ್ಯಕರ್ತನಾಗಿದ್ದು, ನಿಮ್ಮ ಸಂಸ್ಥೆಯು ಬಿಬಿಎಂಪಿಯಿಂದ ಮಂಜೂರಾದ ಯೋಜನೆಯಂತೆ ಕಟ್ಟಡ ನಿರ್ಮಿಸದೆ ಅಕ್ರಮವೆಸಗಿದ್ದೀರಾ ಎಂದು ಬೆದರಿಸಿದ್ದರು. 80 ಲಕ್ಷ ರೂ. ಹಣ ನೀಡದಿದ್ದರೆ ಈ ಬಗ್ಗೆ ಬಿಬಿಎಂಪಿಗೆ ದೂರು ನೀಡಲಾಗುವುದು ಎಂದು ಧಮ್ಕಿ ಹಾಕಿದ್ದರು.
ಜೊತೆಗೆ ವಿಜಯನಗರ, ರಾಜಾಜಿನಗರ ಸೇರಿದಂತೆ ಹಲವೆಡೆ ರಿಯಲ್ ಎಸ್ಟೇಟ್ ಹಾಗೂ ಭೂ ಡೆವಲಪರ್ಸ್ ಮಾಲೀಕರನ್ನು ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ಈ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತನಾಗಿರುವ ರಕ್ಷಿತ್, 2021 ರಲ್ಲಿ ತಾವರಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಆರ್ಟಿಐ ಕಾರ್ಯಕರ್ತ ವೆಂಕಟೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಹಣ ವರ್ಗಾವಣೆ ಸೋಗಿನಲ್ಲಿ ಯಾಮಾರಿಸುತ್ತಿದ್ದ ವಂಚಕನ ಬಂಧನ