ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿ ಜಾಮೀನು ಪಡೆದಿದ್ದ ಏಳು ಮಂದಿ ಆರೋಪಿಗಳ ಪೈಕಿ ಇಬ್ಬರಿಗೆ ಶ್ಯೂರಿಟಿ ಸಿಗದ ಪರಿಣಾಮ ಕಾರಾಗೃಹದಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ.
ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್, ನಾಗರಾಜ್, ಪ್ರದೂಷ್, ಲಕ್ಷ್ಮಣ್ ಬಿಡುಗಡೆಯಾಗಿದ್ದು, ಇನ್ನಿಬ್ಬರಾದ ಜಗದೀಶ್ ಹಾಗೂ ಅನುಕುಮಾರ್ಗೆ ಯಾರೂ ಶ್ಯೂರಿಟಿ ನೀಡಲು ಮುಂದಾಗದೆ ಸೆರೆಮನೆಯಲ್ಲಿದ್ದಾರೆ. ಇದೇ ಪ್ರಕರಣದಲ್ಲಿ ಪೊಲೀಸರೆದುರು ಶರಣಾಗಿದ್ದ ಆರೋಪಿಗಳಾದ ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್‌ಗೆ ಶ್ಯೂರಿಟಿ ನೀಡಿದ್ದರಿಂದ ಸುಮಾರು 10 ದಿನಗಳ ಕಾಲ ಜೈಲಿನಲ್ಲಿ ಉಳಿದಿದ್ದರು.
6ನೇ ಆರೋಪಿಯಾಗಿರುವ ಜಗದೀಶ್ ಚಿತ್ರದುರ್ಗ ಮೂಲದವರು. ಇವರ ತಾಯಿ ಸುಲೋಚನಾ ಪ್ರತಿಕ್ರಿಯಿಸಿ, "ಜಾಮೀನು ಸಿಕ್ಕರೂ ಶ್ಯೂರಿಟಿ ನೀಡದಿದ್ದರಿಂದ ಇಂದು ಜೈಲಿನಿಂದ ಬಿಡುಗಡೆಯಾಗಿಲ್ಲ. ಸಂಬಂಧಿಯೊಬ್ಬರು ಪಹಣಿ ಪತ್ರ ತೆಗೆದುಕೊಂಡು ನ್ಯಾಯಾಲಯಕ್ಕೆ ಹೋದರೂ ಮೂವರ ಶ್ಯೂರಿಟಿ ಅಗತ್ಯವಾಗಿದ್ದರಿಂದ ವಾಪಸ್ ಬರಬೇಕಾಯಿತು. ಜೈಲಿನಿಂದ ಮಗ ಹೊರಬರಲು ದರ್ಶನ್ ವ್ಯವಸ್ಥೆ ಮಾಡಬೇಕು. ನಮ್ಮ ಬಳಿ ಬೆಂಗಳೂರಿಗೆ ಹೋಗಿಬರಲು ಹಣವಿಲ್ಲ" ಎಂದರು.
ಪ್ರಕರಣದ 7ನೇ ಆರೋಪಿ ಅನುಕುಮಾರ್ ಪರಿಸ್ಥಿತಿ ವ್ಯತಿರಿಕ್ತವಾಗಿಲ್ಲ. ತಂದೆ ನಿಧನದ ಬಳಿಕ ಬಡತನ ಹೆಚ್ಚಾಗಿದೆ. ತಾಯಿ ಹೂ ಕಟ್ಟಿ ಮಾರುವ ಕೆಲಸ ಮಾಡುತ್ತಿದ್ದಾರೆ. ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಮೂವರ ಶ್ಯೂರಿಟಿ ನೀಡಬೇಕೆಂದು ನ್ಯಾಯಾಲಯ ತಿಳಿಸಿದೆ.
"ಒಂದು ಲಕ್ಷ ರೂ ಮೊತ್ತದ ಬಾಂಡ್ ಒದಗಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಅಲ್ಲದೆ ಶ್ಯೂರಿಟಿ ನೀಡಲು ಯಾರೂ ಮುಂದಾಗಿಲ್ಲ" ಎಂದು ಅವರ ಮನೆಯವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ವಿನಯ್ ಹಾಗೂ ಪವನ್ಗೆ ಜಾಮೀನು ಅರ್ಜಿ ತಿರಸ್ಕೃತವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ, ಲಕ್ಷ್ಮಣ್ ಜೈಲಿನಿಂದ ಬಿಡುಗಡೆ - PAVITRA GOWDA RELEASED FROM JAIL