ತುಮಕೂರು: ಜಿಲ್ಲೆಯ 18 ಕಡೆ ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ತುಮಕೂರು ಜಿಲ್ಲಾ ಪೊಲೀಸರು, 29 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಜಿ.ಆರ್.ಚಿನ್ನ ಮತ್ತು ರಿಜ್ವಾನ್ ಭಾಷಾ ಬಂಧಿತರು.
ಜಿಲ್ಲೆಯ ಮಿಡಿಗೇಶಿ, ಕೊಡಿಗೇನಹಳ್ಳಿ, ಮಧುಗಿರಿ ಉಪವಿಭಾಗದ ಕೊರಟಗೆರೆ, ಪಟ್ಟನಾಯಕನಹಳ್ಳಿ, ಬಡವನಹಳ್ಳಿ, ಗೌರಿಬಿದನೂರು ಗ್ರಾಮಾಂತರ ಮಂಚೇನಹಳ್ಳಿ, ಮಡಕಶಿರಾ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಬರುವ ಮಹಿಳೆಯರ ಕೊರಳಲ್ಲಿದ್ದ ಚಿನ್ನದ ಸರ, ಕಿವಿಯೊಲೆ ಮತ್ತು ಮೊಬೈಲ್ ಕಿತ್ತುಕೊಂಡು ಆರೋಪಿಗಳು ಪರಾರಿಯಾಗುತ್ತಿದ್ದರು.
ಮಾರ್ಚ್ 12ರಂದು ಅಂಬಿಕಾ ಎಂಬವರು ಮಿಡಿಗೇಶಿ-ಐಡಿಹಳ್ಳಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಇದೇ ವೇಳೆ, ಮಿಡಿಗೇಶಿ ಕಡೆಯಿಂದ ಐ.ಡಿ.ಹಳ್ಳಿ ಕಡೆಗೆ ಸುಮಾರು 35-40 ವರ್ಷ ಮಯಸ್ಸಿನ ಇಬ್ಬರು ಅಪರಿಚಿತರು ಸ್ಕೂಟಿಯಲ್ಲಿ ಬಂದಿದ್ದಾರೆ. ಒಬ್ಬ ವ್ಯಕ್ತಿ ಹಿಂಬದಿಯಿಂದ ಮಹಿಳೆಯ ಬಾಯಿ ಮುಚ್ಚಿ ಹಿಡಿದಿದ್ದಾನೆ. ನಂತರ ಇಬ್ಬರೂ ಸೇರಿಕೊಂಡು ಕೊರಳಲ್ಲಿದ್ದ 30 ಗ್ರಾಂ ತೂಕದ ಸುಮಾರು 1,20,000 ರೂ. ಬೆಲೆಯ ಬಂಗಾರದ ಮಾಂಗಲ್ಯ ಸರ ಕಿತ್ತುಕೊಂಡಿದ್ದಾರೆ. ಕಿವಿಯಲ್ಲಿದ್ದ 8 ಗ್ರಾಂ ತೂಕದ 32,000 ರೂ. ಬೆಲೆಯ ಬಂಗಾರದ ಓಲೆ ಮತ್ತು ಕಿವಿ ಚೈನ್ ಅನ್ನೂ ಕಿತ್ತುಕೊಂಡಿದ್ದಾರೆ. ಈ ಕುರಿತು ಸಂತ್ರಸ್ತೆ ಮಿಡಿಗೇಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ನೆಲಮಂಗಲ ಟೌನ್ ಪೊಲೀಸರಿಂದ ಭರ್ಜರಿ ಬೇಟೆ: ಮನೆಗಳ್ಳತನ, ಸರಗಳ್ಳತನದಲ್ಲಿ ಭಾಗಿಯಾದ್ದ ಖದೀಮರ ಬಂಧನ - thieves Arrested