ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್ ಕಿತ್ತುಹೋದ ಹಿನ್ನೆಲೆಯಲ್ಲಿ ಗುರುವಾರ ತಾತ್ಕಾಲಿಕ ಗೇಟ್ ಜೋಡಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಮೊದಲ ಹಂತದ ಕೆಲಸ ನಿಂತಿದೆ.
ಜಲಾಶಯದಲ್ಲಿ ಸ್ಟಾಪ್ ಲಾಗ್ ಗೇಟ್ನ ಮೊದಲ ಎಲಿಮೆಂಟ್ ಅಳವಡಿಸುವ ಕೆಲಸವನ್ನು ಜಲಾಶಯದ ಇಂಜಿನಿಯರ್ ಕಣ್ಣಯ್ಯ ಅವರ ತಂತ್ರಜ್ಞರ ತಂಡ ಹಮ್ಮಿಕೊಂಡಿತ್ತು. ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ನಡೆದಿತ್ತಾದರೂ ಕೊನೆ ಕ್ಷಣದಲ್ಲಿ ತಾತ್ಕಾಲಿಕ ಗೇಟ್ನ ಅಳತೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದು ಕಾರ್ಯಾಚರಣೆ ನಿಲ್ಲಿಸಲಾಗಿದೆ.
ಜಲಾಶಯದ 19ನೇ ಕ್ರಸ್ಟ್ ಗೇಟ್ಟ್ನಲ್ಲಿ ನೀರಿನ ಹರಿವು ಹೆಚ್ಚಿದ್ದು, ಹರಿಯುವ ನೀರಿನಲ್ಲಿ ಸ್ಟಾಪ್ ಲಾಗ್ ಗೇಟ್ ಆಳವಡಿಸುವುದು ಸವಾಲಿನ ಕೆಲಸ. ಎರಡು ಬೃಹತ್ ಕ್ರೇನ್ಗಳ ಮೂಲಕ ಇಂದು ಮಧ್ಯಾಹ್ನ 3 ಗಂಟೆಯಿಂದಲೇ ಕೆಲಸ ಪ್ರಾರಂಭಿಸಿದ್ದರಾದರೂ ಸಾಕಷ್ಟು ತಾಂತ್ರಿಕ ತೊಡಕು ಎದುರಾಯಿತು. ಎಷ್ಟೇ ಪ್ರಯತ್ನಿಸಿದರೂ ಒಂದು ಎಲಿಮೆಂಟ್ ಅಳವಡಿಸಲು ಸಾಧ್ಯವಾಗಲಿಲ್ಲ. ನಾಳೆ ಬೆಳಿಗ್ಗೆಯಿಂದ ಮತ್ತೆ ಸ್ಟಾಪ್ ಲಾಗ್ ಗೇಟ್ ಆಳವಡಿಕೆ ಕಾರ್ಯ ಶುರು ಮಾಡುವ ಸಾಧ್ಯತೆ ಇದೆ.