ದಾವಣಗೆರೆ: ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದ ಕೂಗಳತೆಯಲ್ಲಿರುವ ತುಂಗಾ ಮೇಲ್ದಂಡೆ ನಾಲೆ ಒಡೆದು ಅವಾಂತರ ಸೃಷ್ಟಿ ಆಗಿತ್ತು. ಇದೀಗ ನಾಲೆಯ ಒಡೆದ ಸ್ಥಳದಲ್ಲಿ ದುರಸ್ತಿ ಕಾರ್ಯ ಭರ್ಜರಿಯಾಗಿ ಸಾಗಿದೆ. ಈಗಾಗಲೇ ಘಟನಾ ಸ್ಥಳದಲ್ಲಿ ಜೆಸಿಬಿಗಳು ಘರ್ಜಿಸುತ್ತಿದ್ದು, ದುರಸ್ತಿ ಕಾರ್ಯ ಮುಂದಿನ ಹತ್ತು ದಿನಗಳಲ್ಲಿ ಪೂರ್ಣಗೊಳಿಸುವ ಗುರಿ ಇಲಾಖೆಯ ಅಧಿಕಾರಿಗಳು ಇಟ್ಟುಕೊಂಡಿದ್ದಾರೆ. ಅಲ್ಲದೆ ಕಾಲುವೆ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಸಾವಿರಾರು ಎಕರೆಗೆ ನೀರು ಒದಗಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಸೋಮವಾರದಿಂದಲೇ ನಾಲೆ ದುರಸ್ತಿ ಕಾಮಗಾರಿ ಆರಂಭವಾಗಿದೆ. ನಾಲೆಯ ನೆಲಕ್ಕೆ ಕಬ್ಬಿಣದ ಸರಳುಗಳನ್ನು ಹಾಸಲಾಗಿದೆ. ಕಬ್ಬಿಣದ ಸರಳುಗಳ ಮೇಲೆ ಸಿಮೆಂಟ್ ಬೆಡ್ ಹಾಕಿ, ಗೋಡೆಯನ್ನು ತಾತ್ಕಾಲಿಕಾಗಿ ದುರಸ್ತಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ರೈತರಿಗೆ ನೀರಿನ ಸಮಸ್ಯೆ ಆಗ್ತಿರುವ ಕಾರಣ ತುಂಗಾ ಮೇಲ್ದಂಡೆ ನಾಲೆಯಲ್ಲಿ ತುರ್ತಾಗಿ ನೀರು ಹರಿಯಬೇಕಾಗಿದೆ. ಮುಂದಿನ ಬೇಸಿಗೆಯಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳುವ ಬಗ್ಗೆ ಇಲಾಖೆ ಗಮನಹರಿಸಲಿದೆ ಎಂದು ಯುಟಿಪಿ ಎಇಇ ಕೆ.ಮಂಜುನಾಥ ತಿಳಿಸಿದರು.
ಭಾನುವಾರದಂದು ಈ ನಾಲೆ ಏಕಾಏಕಿ ಒಡೆದ ಹಿನ್ನೆಲೆ ನೂರಾರು ಎಕರೆ ಕೃಷಿ ಜಮೀನು ಜಲಾವೃತವಾಗಿತ್ತು. ಅಲ್ಲದೆ ನೀರು ಜಮೀನುಗಳಿಗೆ ನುಗ್ಗಿದ ಪರಿಣಮ ಕೈಗೆ ಬಂದಿದ್ದ ಫಸಲು ನಷ್ಟವಾಗಿದೆ. ನಾಲೆ ಒಡೆದ ಬೆನ್ನಲ್ಲೇ ಹೊನ್ನಾಳಿ-ನ್ಯಾಮತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಜಿ.ಶಾಂತನಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಲೆಯ ತಡೆಗೋಡೆ ಹೊಡೆದ ಪರಿಣಾಮ ಮೆಕ್ಕೆಜೋಳ, ಅಡಿಕೆ, ಹತ್ತಿ ಸೇರಿದಂತೆ ಸಾವಿರಾರು ಎಕರೆ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ರೈತರು ಇದೀಗ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ಕಳೆದುಕೊಂಡಿರುವ ರೈತ ಕಂಗಾಲಾಗಿದ್ದಾರೆ. ಇದೀಗ ಸಾಲ ತೀರಿಸಲು ಹಣವಿಲ್ಲದೆ ಇತ್ತ ಬೆಳೆದ ಬೆಳೆ ಕೂಡ ಕೈಸೇರದೆ ಆತಂಕಕೊಳಗಾಗಿದ್ದು ಕೂಡಲೇ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ತುಂಗಾ ಮೇಲ್ದಂಡೆ ನಾಲೆ ಒಡೆದು ರೈತರ ಸಾವಿರಾರು ಎಕರೆ ಜಮೀನು ಜಲಾವೃತ - Tunga upper bank canal burst