ದಾವಣಗೆರೆ : ಉತ್ತರ ಭಾರತದ ಹರಿದ್ವಾರ, ಋಷಿಕೇಶ, ವಾರಣಾಸಿಯಲ್ಲಿ ಗಮನ ಸೆಳೆದಿರುವ ಗಂಗಾ ಆರತಿಯ ಮಾದರಿಯಂತೆ ಇನ್ಮುಂದೆ ಜಿಲ್ಲೆಯ ಹರಿಹರ ತುಂಗಭದ್ರಾ ನದಿ ತಟದಲ್ಲೂ ತುಂಗಾ ಆರತಿ ನಡೆಯಲಿದೆ. ದಕ್ಷಿಣದ ಕಾಶಿ ಎಂದೇ ಖ್ಯಾತಿ ಗಳಿಸಿರುವ ಹರಿಹರ ನಗರದ ತುಂಗಭದ್ರಾ ನದಿ ದಡದಲ್ಲಿ ಸುಮಾರು 16 ಕೋಟಿ ರೂಪಾಯಿ ವೆಚ್ಚದಲ್ಲಿ ತುಂಗಾ ಆರತಿ ಮಂಟಪ ಕಾಮಗಾರಿ ಮುಗಿದಿದೆ. ಇದೀಗ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
ಹರಿಹರ ಮಧ್ವಾಚಾರ್ಯರು, ಶಂಕರಾಚಾರ್ಯರು ತಪಸ್ಸು ಮಾಡಿದ ಸ್ಥಳ ಕೂಡ ಹೌದು. ಹರಿಹರದ ಗುರು ರಾಘವೇಂದ್ರ ಮಠದ ಹಿಂಭಾಗದಲ್ಲಿ ಈ ತುಂಗಾ ಆರತಿಯ ಮಂಟಪವನ್ನು ಸಿದ್ಧಪಡಿಸಲಾಗಿದೆ.
ಇದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕನಸಿನ ಯೋಜನೆ ಆಗಿದ್ದು, ಅವರು ಸಿಎಂ ಆಗಿದ್ದ ಅವಧಿಯಲ್ಲಿ ಈ ಕಾಮಗಾರಿಗೆ ಚಾಲನೆ ನೀಡಿದ್ದರು. ಬರೋಬ್ಬರಿ 16 ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿ ತಟದಲ್ಲಿ ಎಂಟು ಭವ್ಯ ಮಂಟಪಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಜನರನ್ನು ಆಕರ್ಷಿಸಲು ಬೃಹತ್ ಗಾತ್ರದ ಶಿವ ಕುಳಿತಿರುವ ವಿಗ್ರಹ ನಿರ್ಮಿಸಲಾಗಿದೆ. ಹಳೇ ಕಾಲದ ಬ್ರಿಡ್ಜ್ ಬಳಿ ಕಾಂಕ್ರೀಟ್ ಹಾಕಿ ಮೆಟ್ಟಿಲುಗಳನ್ನು ನಿರ್ಮಿಸಿ 'ತುಂಗಾ ಆರತಿ' ಮಾಡಲು ಸಿದ್ಧತೆ ನಡೆದಿದೆ. ಈಗಾಗಲೇ ಇಡೀ ಕಾಮಗಾರಿ ಮುಕ್ತಾಯವಾಗಿದ್ದು, ಮೊದಲ 'ತುಂಗಾ ಆರತಿ' ಕೆಲವೇ ದಿನಗಳಲ್ಲಿ ನೆರವೇರಲಿದೆ.
ಕಾಶಿಯಲ್ಲಿ ಗಂಗೆಗೆ ಆರತಿಯಂತೆ ತುಂಗೆಗೆ ಆರತಿ : ಈ ಬಗ್ಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರತಿಕ್ರಿಯಿಸಿ, "ಇಲ್ಲಿ ದೊಡ್ಡ ಬೃಂದಾವನ ಸೃಷ್ಟಿ ಮಾಡಲು ಚಿಂತನೆ ಇದೆ. ಜನವರಿ 15 ಕ್ಕೆ ಮೊದಲ ತುಂಗಾ ಆರತಿ ಮಾಡಲಾಗುತ್ತದೆ ಎಂದು ಹರ ಮಠದ ಶ್ರೀ ವಚನಾನಂದ ಶ್ರೀ ತಿಳಿಸಿದ್ದಾರೆ. ಮಂಟಪಗಳ ಮುಂಭಾಗ ಒಂದು ಬೃಂದಾವನದ ವಾತಾವರಣ ನಿರ್ಮಾಣ ಮಾಡಲು ಎಸ್ ಎಸ್ ಮಲ್ಲಿಕಾರ್ಜುನ್ ಅವರ ಗಮನಕ್ಕೆ ತರಲಾಗುವುದು. ಅಭಿವೃದ್ಧಿ ಕೆಲಸಕ್ಕೆ ನಮ್ಮ ಶಾಮನೂರು ಕುಟುಂಬ ನಿಮ್ಮ ಜೊತೆಯಲ್ಲಿದೆ" ಎಂದು ಹೇಳಿದರು.
ಜನವರಿ 15 ಕ್ಕೆ ಜರುಗಲಿದೆ ಮೊದಲ ತುಂಗಾ ಆರತಿ : ಈ ಬಗ್ಗೆ ಸಂಸದ ಬಸವರಾಜ್ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿ, "ಅಂದು ಕಾಶಿಯಲ್ಲಿ ಪ್ರಧಾನಿ ಮೋದಿ ಅವರು ಆರತಿ ಮಾಡಿದ್ದರು. ಅಲ್ಲಿ ಗಂಗೆ ಹರಿಯುತ್ತಾಳೆ ಅಲ್ಲಿ ಗಂಗಾರತಿ ಆಗುತ್ತೆ. ದಕ್ಷಿಣ ಕಾಶಿ ತುಂಗಭದ್ರೆ ಹರಿಯುತ್ತಾಳೆ, ಇಲ್ಲಿ ತುಂಗಾ ಆರತಿ ಏಕೆ ಮಾಡ್ಬಾರದು? ಎಂದು ಯೋಚನೆ ಇತ್ತು. ಇಲ್ಲಿ ಏನಾದರೂ ಮಾಡಲು ಸಾಧ್ಯನಾ ಎಂದು ಬಂದು ನೋಡಿದ್ದೆ. ಅಧಿಕಾರ ಇದ್ದಾಗ ಇದನ್ನು ಮಾಡಿದ್ದೇನೆ. ಇನ್ನು ಹರಿಹರ ಎಂದರೆ ತುಂಗಭದ್ರಾ ಸಂಗಮ ಆಗಿ ಹರಿಯುವ ಸ್ಥಳ. ಇಂತಹ ಪವಿತ್ರ ಸ್ಥಳದಲ್ಲಿ ಆರತಿ ಮಾಡುವಂತಹದ್ದು ವಿಶೇಷ" ಎಂದರು.
ಈ ತುಂಗಾ ಆರತಿಯ ವಿಶೇಷತೆ ಏನು? : ತುಂಗಭದ್ರಾ ನದಿಗಳು ಸಂಗಮವಾಗಿ ಹರಿದುಬರುವ ಸ್ಥಳ ಹರಿಹರ. ಇಲ್ಲಿ ಪ್ರತಿದಿನ ಮುಸ್ಸಂಜೆ ವೇಳೆಯಲ್ಲಿ ದಾವಣಗೆರೆಯ ಜೀವನಾಡಿ ತುಂಗಭದ್ರಾ ನದಿಗೆ ತುಂಗಾ ಆರತಿ ನಡೆಸಲಾಗುತ್ತದೆ. ಇದು ಅತ್ಯಂತ ಶಕ್ತಿಯುತವಾದ ಹಾಗೂ ಉನ್ನತಿಗೇರಿಸುವ ಆಧ್ಯಾತ್ಮಿಕ ಆಚರಣೆಯಾಗಿದೆ. ಆರತಿ ಭಕ್ತಿಯ ಆಚರಣೆಯಾಗಿದೆ. ಅದು ಬೆಂಕಿಯನ್ನು ನೈವೇದ್ಯವಾಗಿ ಬಳಸಲಾಗುತ್ತದೆ. ಮೇಣದಬತ್ತಿ ಮತ್ತು ಹೂವುಗಳೊಂದಿಗೆ ಸಣ್ಣ ದಿಯಾ (ಹಣತೆ)ಯನ್ನು ಅರ್ಪಣೆ ಮಾಡಲಾಗುತ್ತದೆ. ಆರತಿಯನ್ನು ನದಿಗೆ ಅಭಿಮುಖವಾಗಿ ನಡೆಸಲಾಗುತ್ತದೆ. ದೀಪಗಳನ್ನು ಬೆಳಗಿಸಲಾಗುತ್ತದೆ ಮತ್ತು ಪುರೋಹಿತರು ಬೃಹತ್ ಗಾತ್ರದ ದೀಪ ಹಿಡಿದು ನದಿಗೆ ಆರತಿ ಬೆಳಗುವುದೇ ತುಂಗಾ ಆರತಿಯ ಸಂಭ್ರಮವಾಗಿದೆ. ಇದು ಗಂಗಾ ಆರತಿಯ ಮಾದರಿಯಾಗಿದ್ದು, ಅಲ್ಲಿ ಯಾವ ರೀತಿ ಗಂಗೆಗೆ ಆರತಿ ಬೆಳಗಲಾಗುತ್ತೋ ಹಾಗೆ ಇಲ್ಲಿಯೂ ಅದೇ ಯೋಜನೆ ಹಾಕಿಕೊಳ್ಳಲಾಗಿದೆ.