ತುಮಕೂರು: ಕಳೆದ ಒಂದು ತಿಂಗಳ ಅಂತರದಲ್ಲಿ ಪೌರ ಕಾರ್ಮಿಕರು ತುಮಕೂರು ನಗರದಲ್ಲಿ ಸಂಗ್ರಹಿಸಿದ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳಿಂದ ರಚಿಸಲಾದ ತುಮಕೂರು ಎಂಬ ಪದದ ಕಲಾಕೃತಿಯು ಗಿನ್ನೆಸ್ ಬುಕ್ ಆಫ್ ವರ್ಡ್ ರೆಕಾರ್ಡ್ ಪುಟಕ್ಕೆ ಸೇರ್ಪಡೆಯಾಗಿದೆ.
ಕಲ್ಪತರು ನಾಡಿನ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ನೇತೃತ್ವದಲ್ಲಿ, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ಸಿಟಿ ಸಹಯೋಗದಲ್ಲಿ ಬಾಟಲ್ಗಳ ಮೂಲಕ ಕಲಾಕೃತಿ ರಚಿಸಲಾಗಿದೆ. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗಾಗಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಒಮ್ಮೆ ಉಪಯೋಗಿಸಿ ಎಸೆದ ಬಾಟಲ್‌ಗಳಿಂದ ಈ ಪ್ರಯತ್ನ ಮಾಡಲಾಯಿತು. ಈ ದಾಖಲೆಗೆ ಸುಮಾರು 1 ಲಕ್ಷ ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಅಲ್ಲದೇ ವಿವಿಧ ಆಕೃತಿಯ ಬಾಟಲಿಗಳನ್ನು ಕೂಡಾ ಬಳಕೆ ಮಾಡಿಕೊಳ್ಳಲಾಗಿದೆ. ಕಳೆದ 20 ದಿನಗಳಿಂದ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್ಗಳ ಮನೆಗಳಿಂದ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಫುಡ್‌ಸ್ಟ್ರೀಟ್ ಅಂಗಡಿಗಳು, ಕಲ್ಯಾಣ ಮಂಟಪ, ಕನ್ವೆನ್ಷನ್ ಹಾಲ್‌ಗಳಿಂದ ಸಂಗ್ರಹಿಸಲಾದ ಅನುಪಯುಕ್ತ ಅರ್ಧ ಲೀ., 1 ಲೀ., 2 ಲೀ., ಬಾಟಲ್‌ಗಳನ್ನು ಪ್ರತ್ಯೇಕಿಸಿ, ವಿದ್ಯಾರ್ಥಿಗಳು, ಪೌರ ಕಾರ್ಮಿಕರು, ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಸಾರ್ವಜನಿಕರು ಸೇರಿ ಕಲಾಕೃತಿಯನ್ನು ನಿರ್ಮಿಸಿದರು. ಲಂಡನ್ ನಿಂದ ಆಗಮಿಸಿದ್ದ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ತೀರ್ಪುಗಾರರು ಇದಕ್ಕೆ ಸಾಕ್ಷಿಯಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರಿಗೆ ಆಗಮಿಸಿದ ಕಾರ್ಯಕ್ರಮದಲ್ಲೇ ಗಿನ್ನೆಸ್ ದಾಖಲೆಯ ಅವಾರ್ಡ್ ಸ್ವೀಕರಿಸಲಾಯಿತು.
ಇದನ್ನೂ ಓದಿ: ಹುಡುಗಿಯಲ್ಲ! ಅತಿ ಉದ್ದ ಕೂದಲು ಬೆಳೆಸಿ ಗಿನ್ನಿಸ್ ದಾಖಲೆ ಬರೆದ ಹುಡುಗ: ವಿಡಿಯೋ ನೋಡಿ