ತುಮಕೂರು: ಲೋಕಸಭಾ ಕ್ಷೇತ್ರದ ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ವಿ. ಸೋಮಣ್ಣ ಪರವಾಗಿ ಇಂದು ಜಿಲ್ಲೆಯ ವಿವಿಧೆಡೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬಹಿರಂಗ ಪ್ರಚಾರ ನಡೆಯಿತು.
ತಿಪಟೂರಿನ ನೋಣವಿನಕೆರೆಯಲ್ಲಿ ನಡೆದ ಬಹಿರಂಗ ಪ್ರಚಾರ ಸಮಾವೇಶದಲ್ಲಿ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಕೆಲ ಕಾಲ ಗೊಂದಲಕ್ಕೆ ಒಳಗಾದರು. ಜೆಡಿಎಸ್ ಪಕ್ಷದ ಎರಡು ಬಣಗಳಲ್ಲಿನ ಅಸಮಾಧಾನ ಬಹಿರಂಗವಾಗಿ ಕಾಣಿಸಿಕೊಂಡಿತು. ಇದು ಜೆಡಿಎಸ್ ಮುಖಂಡ ರಾಕೇಶ್ ಗೌಡ ಹಾಗೂ ಶಾಂತಕುಮಾರ್ ಬೆಂಬಲಿಗರ ನಡುವೆ ಗಲಾಟೆಗೂ ಕಾರಣವಾಯಿತು. ರಾಕೇಶ್ ಗೌಡ ನೇತೃತ್ವದಲ್ಲಿ ಪ್ರಚಾರ ರ್ಯಾಲಿ ನಡೆಸುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಒತ್ತಾಯಿಸಿದರು. ಇದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ತಕ್ಷಣ ಈ ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಕೊನೆಗೆ ಖುದ್ದು ಪ್ರಚಾರ ವಾಹನದಿಂದ ಕೆಳಗಿಳಿದು ಹೋಗಿ ಕಾರ್ಯಕರ್ತರನ್ನು ಸೋಮಣ್ಣ ಸಮಾಧಾನಪಡಿಸಿದರು. ಎಚ್ ಡಿ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಇಬ್ಬರು ನೊಣವಿನಕೆರೆ ತಿಪಟೂರು ಗುಬ್ಬಿ ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ದಿನವಿಡೀ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.