ಕಾರವಾರ (ಉತ್ತರ ಕನ್ನಡ): ಕಾಳಿ ನದಿಯ ಹಳೆಯ ಸೇತುವೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಟ್ರಕ್ವೊಂದು ನದಿಗೆ ಉರುಳಿದ್ದು, ಅದೃಷ್ಟವಶಾತ್ ಚಾಲಕನನ್ನು ರಕ್ಷಣೆ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಕಾರವಾರ - ಗೋವಾ ಸಂಪರ್ಕಿಸುವ ನಗರದ ಕೋಡಿಭಾಗ್ ಬಳಿ ಇರುವ ಈ ಸೇತುವೆ ಬುಧವಾರ ತಡರಾತ್ರಿ ಸುಮಾರು 12.50ರ ವೇಳೆ ಕುಸಿಸಿದೆ. ಫಿಲ್ಲರ್ ಕಂಬಗಳ ನಡುವೆ ಸೇತುವೆ ಮೂರ್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿದೆ. ಇದೇ ವೇಳೆ ಗೋವಾದಿಂದ ಕಾರವಾರ ಕಡೆಗೆ ಆಗಮಿಸುತ್ತಿದ್ದ ಟ್ರಕ್ ನದಿಗೆ ಉರುಳಿತ್ತು. ತಕ್ಷಣ ಮೀನುಗಾರರು ಹಾಗೂ ಸ್ಥಳೀಯ ಪೊಲೀಸರು ಲಾರಿ ಚಾಲಕ, ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಎಂಬವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಸಂಭವಿಸುವ ವೇಳೆ ಬೈಕ್ ಹಾಗೂ ಕಾರು ಕೂಡ ಇದೇ ಸೇತುವೆ ಮೇಲೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದ್ದು, ಅವರು ಸ್ವಲ್ಪದರಲ್ಲೇ ಮುಂದೆ ಸಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಟ್ರಕ್ ನೀರಿನಲ್ಲಿ ಬಿದ್ದಿದ್ದು, ನದಿಯಲ್ಲಿ ಮತ್ಯಾವುದಾದರೂ ವಾಹನಗಳಿವೆಯಾ ಎಂಬ ಬಗ್ಗೆ ಸ್ಥಳೀಯ ಮೀನುಗಾರರ ಜೊತೆ ಪೊಲೀಸರು ದೋಣಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ.
''ದೊಡ್ಡದಾಗಿ ಶಬ್ದ ಬಂತು ಹೊರಗೆ ಬಂದು ನೋಡಿದಾಗ ಸೇತುವೆ ಸಂಪೂರ್ಣ ಕುಸಿದಿತ್ತು. ಓರ್ವನನ್ನು ಮೀನುಗಾರರು ಹಾಗೂ ಪೊಲೀಸರು ರಕ್ಷಣೆ ಮಾಡಿದ್ದಾರೆ. ಸದ್ಯ ಒಂದು ಟ್ರಕ್ ಮಾತ್ರ ನದಿಗೆ ಬಿದ್ದಿದೆ ಎಂದು ಹೇಳುತ್ತಿದ್ದಾರೆ. ಬೈಕ್, ಕಾರು ಕೂಡ ಇತ್ತು ಅವರು ಮುಂದೆ ಚಲಿಸಿರಬಹುದು ಎನ್ನುತ್ತಿದ್ದಾರೆ. ಈಗಾಗಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೀನುಗಾರರೊಂದಿಗೆ ನದಿಯಲ್ಲಿ ಹುಡುಕಾಟ ನಡೆಸಲಾಗಿದೆ'' ಎಂದು ಸ್ಥಳೀಯರಾದ ನಾಗೇಶ್ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ 66ರ ಈ ಸೇತುವೆ ಸುಮಾರು 60 ವರ್ಷ ಹಳೆಯದಾಗಿತ್ತು. ಕಳೆದ ಎರಡು ವರ್ಷದ ಹಿಂದೆ ರಿಪೇರಿ ಕೂಡ ಮಾಡಲಾಗಿತ್ತು. ಆದರೆ, ಇದೀಗ ಕುಸಿದು ಬಿದ್ದಿದ್ದು, ಸದ್ಯ ಹೊಸ ಸೇತುವೆ ಮೇಲೆಯೂ ಸಂಚಾರ ನಿರ್ಬಂಧಿಸಿರುವ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.