ಧಾರವಾಡ: ವಿಶೇಷ ಚೇತನ ಯುವಕ ಹಾಗೂ ಆ್ಯಸಿಡ್ ಕುಡಿದು ತೊಂದರೆಗೊಳಗಾಗಿದ್ದ ಮೂರು ವರ್ಷದ ಮಗುವಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ತಮ್ಮ ಸಂತೋಷ್ ಲಾಡ್ ಫೌಂಡೇಶನ್‌ನಿಂದ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.
ಯುವಕನ ಜೊತೆ ಬೈಕ್ನಲ್ಲಿ ಪ್ರಯಾಣಿಸಿದ ಲಾಡ್: ವಿಶೇಷ ಚೇತನ ಯುವಕ ಸಿದ್ದು ಎನ್ನುವವರಿಗೆ ಕೆಲವು ದಿನಗಳ ಹಿಂದೆ ಸಂತೋಷ್ ಲಾಡ್ ಅವರು ತ್ರಿಚಕ್ರ ವಾಹನ ನೀಡುವುದಾಗಿ ಹೇಳಿದ್ದರು. ಅದರಂತೆ ತಮ್ಮ ಪೌಂಡೇಶನ್ನಿಂದ ಇಂದು ಯುವಕನಿಗೆ ತ್ರಿಚಕ್ರ ವಾಹನ ವಿತರಿಸಿದ್ದಾರೆ. ಅಷ್ಟೇ ಅಲ್ಲದೇ ತ್ರಿಚಕ್ರ ವಿತರಿಸಿದ ಬಳಿಕ ಸಚಿವರು 'ನಾನು ಬೈಕ್ ಹಿಂದೆ ಕುಳಿತುಕೊಳ್ಳಲಾ?' ಎಂದು ಕೇಳಿದ್ದಾರೆ. ಯುವಕ ಕುಳಿತುಕೊಳ್ಳಿ ಎಂದ ಕೂಡಲೇ, ಹಿಂಬದಿ ಕುಳಿತ ಸಂತೋಷ್ ಲಾಡ್ ಅವರು ಯುವಕನ ಜೊತೆ ಧಾರವಾಡದ ಸರ್ಕಿಟ್ ಹೌಸ್ನಿಂದ ಜಿಲ್ಲಾ ಪಂಚಾಯಿತಿ ವರೆಗೆ ಸವಾರಿ ಮಾಡಿದ್ದಾರೆ. ಅಂಗ ವೈಕಲ್ಯತೆ ಇದ್ದರೂ ಛಲದಿಂದ ಜೀವನ ಸಾಗಿಸುತ್ತಿರುವ ಸಿದ್ದು ಅವರಿಗೆ ಸಂತೋಷ್ ಲಾಡ್ ಹಿಂದೆಯೂ ಸಹಾಯಹಸ್ತ ಚಾಚಿದ್ದರು. ಈ ಹಿಂದೆ ನೀಡಿದ ಮಾತಿನಂತೆ ಇಂದು ಬೈಕ್ ವಿತರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಶೇಷ ಚೇತನ ಯುವಕನ ತ್ರಿಚಕ್ರ ವಾಹನದಲ್ಲಿ ಸವಾರಿ ಮಾಡಿ ಗಮನ ಸೆಳೆದರು.
ಸಿದ್ದು ಅವರು ಮೂಲತಃ ಬೆಳಗಾವಿ ಜಿಲ್ಲೆಯ ಕಿತ್ತೂರಿನವರು. ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಅವರು ಸದ್ಯ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಂತೋಷ್ ಲಾಡ್ ಫೌಂಡೇಶನ್ ಅಧ್ಯಕ್ಷ ಆನಂದ್ ಕುಲಾಲ್ ಅವರಿಗೆ ಫೋನ್ ಮಾಡಿ, ಈ ಯುವಕನಿಗೆ ತ್ರಿಚಕ್ರ ವಾಹನ ಹಾಗೂ 25,000 ರೂಪಾಯಿ ಆರ್ಥಿಕ ಸಹಾಯ ಮಾಡುವಂತೆ ಸಚಿವರು ಹೇಳಿದ್ದರು.
ಮಗುವಿನ ಚಿಕಿತ್ಸೆಗೆ ಸಹಾಯಹಸ್ತ: ಹುಬ್ಬಳ್ಳಿಯ ಅಮ್ರೀನ್ ಅವರ ಪುತ್ರ ಮೊಹಮ್ಮದ್ ಅಜ್ಮತ್ ಎಂಬ ಬಾಲಕ ಆ್ಯಸಿಡ್ ಕುಡಿದು ಹೊಟ್ಟೆಯಲ್ಲಿ ಆಹಾರದ ನಳಿಕೆ ಸುಟ್ಟುಹೋಗಿ ತೊಂದರೆಯಾಗಿತ್ತು. ಮಗುವಿನ ಚಿಕಿತ್ಸೆಗಾಗಿ ಪೋಷಕರು ಸಾಕಷ್ಟು ಹಣ ವೆಚ್ಚ ಮಾಡಿದ್ದರು. ಸಂತೋಷ್ ಲಾಡ್ ತಮ್ಮ ಫೌಂಡೇಶನ್ ಮೂಲಕ ಧನ ಸಹಾಯ ಮಾಡುವುದನ್ನು ತಿಳಿದ ಪೋಷಕರು ಸಚಿವರನ್ನು ಸಂಪರ್ಕಿಸಿ ಮಗುವಿನ ಆರೋಗ್ಯದ ಬಗ್ಗೆ ತಿಳಿಸಿದರು. ಸಂತೋಷ್ ಲಾಡ್ ತಮ್ಮ ಫೌಂಡೇಶನ್ ಮೂಲಕ 35 ಸಾವಿರ ರೂ. ನೀಡಿ ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಸಂತೋಷ್ ಲಾಡ್ ಅವರ ಈ ನೆರವಿಗೆ ಮಗುವಿನ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ. ಸಚಿವ ಸಂತೋಷ್ ಲಾಡ್ ಅವರು ತಮ್ಮ ಫೌಂಡೇಶನ್ ಮೂಲಕ ಹಲವಾರು ರೀತಿಯಲ್ಲಿ ಜನರಿಗೆ ನೆರವಾಗುತ್ತಿದ್ದಾರೆ. ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.
ಇದನ್ನೂ ಓದಿ: ಸಹಾಯ ಅರಸಿ ಬಂದ ವಿಶೇಷ ಚೇತನ ವಿದ್ಯಾರ್ಥಿ; ಸ್ಥಳದಲ್ಲೇ ನೆರವಿನ ಅಭಯ ನೀಡಿದ ಸಚಿವ ಸಂತೋಷ್ ಲಾಡ್