ಮೈಸೂರು: ನಮ್ಮೂರಲ್ಲೇ ನಮಗೆ ಮತಗಟ್ಟೆ ಕೊಡಿ ಇಲ್ಲದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಚನ್ನಗುಂಡಿ ಹಾಡಿಯಲ್ಲಿರುವ ಆದಿವಾಸಿ ಜನರು ಎಚ್ಚರಿಕೆ ನೀಡಿದ್ದಾರೆ.
ನಮ್ಮ ಮತಗಟ್ಟೆಯಲ್ಲೇ ನಾವು ಮತ ಹಾಕುತ್ತೇವೆ. ಬೇರೆ ಊರಿಗೆ ಹೋಗುವುದಿಲ್ಲ. ಮತಗಟ್ಟೆ ಕೊಡದಿದ್ದರೇ ಏಪ್ರಿಲ್ 26 ರಂದು ನಡೆಯುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂದು ಈ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಿವಾಸಿ ಜನರ ಆರೋಪವೇನು?:'ನಮ್ಮ ತಾತ ಮುತ್ತಾತನ ಕಾಲದಿಂದಲೂ ನಾವು ಚನ್ನಗುಂಡಿಹಾಡಿ ಗ್ರಾಮದಲ್ಲಿ ಮತವನ್ನು ಹಾಕಿ ಬರುತ್ತಿದ್ದೇವೆ. ನಮ್ಮೂರಲ್ಲಿ ಇದ್ದ ಮತಗಟ್ಟೆಯನ್ನು ತೆಗೆದು ಹಾಕಿ ಪಕ್ಕದ ಅರಳಹಳ್ಳಿ ಗ್ರಾಮಕ್ಕೆ ವರ್ಗಾಯಿಸಿದ್ದಾರೆ. ಅರಳಹಳ್ಳಿ ಗ್ರಾಮಕ್ಕೆ ಹೋಗಿ ಮತ ಹಾಕಬೇಕು ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ವಯಸ್ಸಾದ ವೃದ್ಧರಿದ್ದಾರೆ. ಅಂಗವಿಕಲರಿದ್ದಾರೆ, ಗರ್ಭಿಣಿ, ಬಾಣಂತಿಯರಿದ್ದಾರೆ. ಸುಮಾರು 5 ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ಮತವನ್ನು ಹಾಕಲು ನಮ್ಮಿಂದ ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ'.
'ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಳಹಳ್ಳಿ ಗ್ರಾಮಕ್ಕೆ ಹೋಗಿ ಮತವನ್ನು ಚಲಾಯಿಸಿದ್ದೇವೆ. ಸಂಚಾರಕ್ಕೆ ಯಾವುದೇ ವಾಹನದ ವ್ಯವಸ್ಥೆಯನ್ನು ಕಲ್ಪಿಸುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಗೆ ನಿಮ್ಮ ಗ್ರಾಮದಲ್ಲಿಯೇ ಮತಗಟ್ಟೆ ತೆರೆಯುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಮತಗಟ್ಟೆಯನ್ನು ತೆರೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ. ನಮ್ಮ ಗ್ರಾಮದಲ್ಲಿ ಬೂತ್ ಮಾಡಿದರೆ ಮಾತ್ರ ನಾವು ವೋಟ್ ಹಾಕುತ್ತೇವೆ ಇಲ್ಲ ಅಂದರೆ ಯಾವುದೇ ಕಾರಣಕ್ಕೂ ನಾವು ಮತ ಹಾಕಲ್ಲ. ವೋಟರ್ ಲಿಸ್ಟ್ನಲ್ಲಿ ಮರಣ ಹೊಂದಿದವರನ್ನು ಜೀವಂತವಿಟ್ಟು, ಜೀವಂತವಾಗಿರುವವರನ್ನು ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.