ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2,500 ನಿರ್ವಾಹಕ ಹುದ್ದೆಯ ನೇಮಕಾತಿ ಸಂಬಂಧ 371-ಜೆ (ಕಲ್ಯಾಣ ಕರ್ನಾಟಕ) ಮೀಸಲಾತಿಯಡಿ 212 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಪತ್ರವನ್ನು ವಿತರಿಸಿದರು.
214 ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿತ್ತು. ನೇಮಕಾತಿಗೆ 5410 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಶೇ.30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು 1334 ಅಭ್ಯರ್ಥಿಗಳು ಗಳಿಸಿದ್ದರು. 1:5 ಪ್ರಮಾಣದಲ್ಲಿ ಮೂಲ ದಾಖಲೆ/ದೇಹದಾರ್ಢ್ಯತೆ ಪರಿಶೀಲನೆಗೆ 657 ಅಭ್ಯರ್ಥಿಗಳನ್ನು ಕರೆಯಲಾಗಿತ್ತು. ಅದರಲ್ಲಿ 535 ಅಭ್ಯರ್ಥಿಗಳು ಅರ್ಹತೆಯನ್ನು ಗಿಟ್ಟಿಸಿದ್ದರು. ಅಂತಿಮವಾಗಿ 212 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಫೆಬ್ರವರಿ ತಿಂಗಳ ಶೇ.3.75 ತುಟ್ಟಿ ಭತ್ಯೆಯ ಹಿಂಬಾಕಿ ಮೊತ್ತವನ್ನು ಎಲ್ಲಾ ವರ್ಗದ ಅಧಿಕಾರಿ/ಸಿಬ್ಬಂದಿಗೆ ನವೆಂಬರ್ ತಿಂಗಳ ವೇತನದೊಂದಿಗೆ ಸೇರಿಸಿ ಪಾವತಿ ಮಾಡಲಾಗಿದೆ. ಈ ಅವಧಿಯಲ್ಲಿ ನಿವೃತ್ತಿಗೊಂಡಿರುವ ಅರ್ಹ ನೌಕರರಿಗೂ ಸಹ ತುಟ್ಟಿ ಭತ್ಯೆ ಹಿಂಬಾಕಿಯನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್, ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕ ಅಬ್ದುಲ್ ಅಹದ್, ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಎಂ.ಶಿಲ್ಪಾ ಹಾಗೂ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಸಾರಿಗೆ ಸಂಸ್ಥೆಯಿಂದ 9 ಸಾವಿರ ಸಿಬ್ಬಂದಿ ನೇಮಕ: ಸಚಿವ ರಾಮಲಿಂಗಾರೆಡ್ಡಿ