ಮಂಗಳೂರು (ದಕ್ಷಿಣ ಕನ್ನಡ): ಮಂಗಳಮುಖಿಯರ ಕಥೆ ವ್ಯಥೆಯನ್ನು ಬಿಂಬಿಸುವ ಕೆಲ ಸಿನಿಮಾಗಳು ಬೆಳ್ಳಿತೆರೆಯಲ್ಲಿ ಈಗಾಗಲೇ ಒಂದಿವೆ. ಈ ಚಿತ್ರಗಳಲ್ಲಿ ಮಂಗಳಮುಖಿಯರ ಪಾತ್ರಗಳನ್ನು ಪುರುಷ ಕಲಾವಿದರು ನಿರ್ವಹಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಂಗಳಮುಖಿಯರ ಕಥೆ ಹೇಳಲಿರುವ ''ಶಿವಲೀಲಾ''ದಲ್ಲಿ ಮಂಗಳಮುಖಿಯರೇ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ.
ಮಂಗಳಮುಖಿಯರನ್ನು ಸಮಾಜ ತಾತ್ಸಾರದಿಂದ ನೋಡುತ್ತದೆ. ಅವರನ್ನು ನಾಗರಿಕ ಸಮಾಜ ತಮ್ಮವರೆಂದು ಸ್ವೀಕರಿಸದೇ ಪ್ರತ್ಯೇಕವಾಗಿರಿಸಿದೆ. ಈ ಕಾರಣದಿಂದಾಗಿ ಹೆಚ್ಚಿನ ಮಂಗಳಮುಖಿಯರು ಗುಂಪು ಗುಂಪಾಗಿ ನಾಗರಿಕ ಸಮಾಜದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಂಗಳಮುಖಿಯರು ಬದುಕಲು ಪಡುವ ಕಷ್ಟ ಯಾರಿಗೂ ತಿಳಿದಿಲ್ಲ. ಇವರ ಕಥೆ ವ್ಯಥೆಯನ್ನು ಬಿಂಬಿಸುವ ಕೆಲ ಸಿನಿಮಾಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಆದ್ರೀಗ ಮಂಗಳ ಮುಖಿಯರೇ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ 'ಶಿವಲೀಲಾ' ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ.

ಚಿತ್ರೀಕರಣ ಬಹುತೇಕ ಪೂರ್ಣ: ಬೆಂಗಳೂರು, ತುಮಕೂರು, ಹೊಸಪೇಟೆ, ಮಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅವರ ಜೀವನ, ಬಾಲ್ಯದಿಂದ ಪಟ್ಟ ಕಷ್ಟ, ಸಮಾಜದ ತಾತ್ಸಾರಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಅಶೋಕ್ ಜಯರಾಮ್ ಅವರು ''ಶಿವಲೀಲಾ'' ನಿರ್ದೇಶಿಸೋ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ಸಹ ನಿರ್ಮಾಪಕರಾದ ಮೊದಲ ಮಂಗಳಮುಖಿ: ಅನಿ ಮಂಗಳೂರು ಚಿತ್ರದ ಸಹ ನಿರ್ಮಾಪಕರು. ಸಹ ನಿರ್ಮಾಣದ ಜವಾಬ್ದಾರಿ ಹೊತ್ತ ಮೊದಲ ಮಂಗಳಮುಖಿ. ಈವರೆಗೆ ದೇಶದಲ್ಲಿ ಮಂಗಳಮುಖಿಯರು ಸಿನಿಮಾ ಕೋ ಪ್ರೊಡ್ಯೂಸರ್ ಆಗಿಲ್ಲ. ಈ ''ಶಿವಲೀಲಾ'' ಸಿನಿಮಾ ಮೂಲಕ ಅನಿ ಮಂಗಳೂರು ದೇಶದ ಮೊದಲ ಮಂಗಳಮುಖಿ ಕೋ ಪ್ರೊಡ್ಯೂಸರ್ ಆಗಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ: ಕನ್ನಡದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾ ಆರು ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ. ತುಳು, ಮಲಯಾಳಂ, ತಮಿಳು, ಹಿಂದಿ, ತೆಲುಗು ಭಾಷೆಗೆ ಈ ಸಿನಿಮಾ ಡಬ್ ಆಗಲಿದೆ.
ಜೋಗತಿ ಮಂಜಮ್ಮ ಸೇರಿ 2,000 ಮಂಗಳಮುಖಿಯರ ಪಾತ್ರ: ಈ ಸಿನಿಮಾದಲ್ಲಿ ಮಂಗಳಮುಖಿ, ಪದ್ಮಶ್ರೀ ಪುರಸ್ಕೃತರಾದ ಜೋಗತಿ ಮಂಜಮ್ಮ ಸೇರಿದಂತೆ ಹಲವು ತೃತೀಯ ಲಿಂಗಿಗಳು ಮುಖ್ಯಭೂಮಿಕೆಯಲ್ಲಿದ್ದಾರೆ. ವಿಲನ್ ಪಾತ್ರವನ್ನು ರಾಶಿ ಎಂಬ ಮಂಗಳಮುಖಿ ನಿರ್ವಹಿಸಿದ್ದಾರೆ. ಒಟ್ಟು 2 ಸಾವಿರ ಮಂಗಳಮುಖಿಯರು ಪಾತ್ರ ನಿರ್ವಹಿಸುವುದು ವಿಶೇಷ.
ದಚ್ಚು ದಿವು ಹೀರೋ: ಸೋಷಿಯಲ್ ಮೀಡಿಯಾ ಇನ್ಪ್ಲುಯೆನ್ಸರ್ , ರೀಲ್ಸ್ ಮೂಲಕ ಖ್ಯಾತರಾಗಿರುವ ದಚ್ಚು ದಿವು ಈ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಇದು ದಚ್ಚು ದಿವು ಅವರ ಮೊದಲ ಸಿನಿಮಾ. ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಮಂಗಳೂರಿನಲ್ಲಿ ಉಳಿದ ಭಾಗ ಮತ್ತು ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯಲಿದೆ.
ಈ ಸಿನಿಮಾ ಬಗ್ಗೆ ಸಹ ನಿರ್ಮಾಪಕರಾದ ಅನಿ ಮಂಗಳೂರು ಮಾತನಾಡಿ, ಸಾಮಾಜಿಕವಾಗಿ, ಮಾನಸಿಕವಾಗಿ ಮಂಗಳಮುಖಿಯರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ರಾಜಕೀಯವಾಗಿ ನಮ್ಮನ್ನು ತುಳಿಯುತ್ತಿರುವುದರಿಂದ ಈ ಸಿನಿಮಾ ಮಾಡಿದ್ದೇವೆ. ನಮ್ಮ ಚಿತ್ರದ ಮೂಲಕ ಮಂಗಳಮುಖಿಯರ ಸಮಸ್ಯೆಗಳನ್ನು ಪ್ರಪಂಚಕ್ಕೆ ತೋರಿಸುತ್ತಿದ್ದೇವೆ. ನಾನು ಸಂಗ್ರಹಿಸಿದ ಒಂದೊಂದು ರೂಪಾಯಿಯನ್ನೂ ವ್ಯರ್ಥ ಮಾಡದೇ ಈ ಸಿನಿಮಾಕ್ಕೆ ಹಾಕಿದ್ದೇನೆ. ತೃತೀಯ ಲಿಂಗಿಯಾಗಿ ಮೊದಲ ಬಾರಿಗೆ ಕೋ ಪ್ರೊಡ್ಯೂಸರ್ ಆಗಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: 'ಲಂಗೋಟಿ ಮ್ಯಾನ್' ಸಿನಿಮಾ ಯಾವ ಸಮುದಾಯವನ್ನೂ ಅವಮಾನಿಸಲ್ಲ: ನಿರ್ದೇಶಕಿ ಸಂಜೋತಾ ಭಂಡಾರಿ - Langoti Man movie
ಸಿನಿಮಾದಲ್ಲಿ ವಿಲನ್ ಪಾತ್ರ ನಿರ್ವಹಿಸಿರುವ ಮಂಗಳಮುಖಿ ರಾಶಿ ಮಾತನಾಡಿ, ಈ ಪಾತ್ರ, ಸಿನಿಮಾ ಸಿಗಲು ನಾನು ಬಹಳ ಪುಣ್ಯ ಮಾಡಿದ್ದೇನೆ. ತೃತೀಯ ಲಿಂಗಿಗಳನ್ನು ಸಮಾಜ ಬೇರೆ ದೃಷ್ಟಿಯಲ್ಲಿ ನೋಡುತ್ತದೆ. ಆದ್ರೆ ನನಗೆ ಖಳನಾಯಕಿಯಾಗಿ ಈ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ತುಂಬಾನೇ ಸಂತಸವಾಗಿದೆ ಎಂದು ಖುಷಿ ಹಂಚಿಕೊಂಡರು.
ಇನ್ನು ಸಿನಿಮಾ ನಾಯಕ ದಚ್ಚು ದಿವು ಮಾತನಾಡಿ, ಯಾರೂ ಬೇಡ ಎಂದು ತಳ್ಳಿರುವವರ ಜೊತೆಗೆ ನಾನು ಅಭಿನಯ ಮಾಡಿದ್ದು ಖುಷಿ ಕೊಟ್ಟಿದೆ. ಈ ಸಿನಿಮಾ ನೋಡಿದ ಬಳಿಕ ಮಂಗಳಮುಖಿಯರ ಮೇಲಿನ ಭಾವನೆ ಬದಲಾಗುತ್ತದೆ. ಮಂಗಳಮುಖಿಯರು ಈ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ ಎಂದರು.
ಒಟ್ಟಿನಲ್ಲಿ ನಾಗರಿಕ ಸಮಾಜದಿಂದ ಪ್ರತ್ಯೇಕವಾಗಿರುವ ಮಂಗಳ ಮುಖಿಯರೇ ನಟಿಸಿರುವ, ಅವರ ಕಥೆ ವ್ಯಥೆ ಹೇಳುವ ಈ ಸಿನಿಮಾ ಅವರ ಮೇಲಿನ ಭಾವನೆಯನ್ನು ಬದಲಾಯಿಸುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ.