ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಮತಗಳು ಅಸಿಂಧುವಾಗದಂತೆ ನೋಡಿಕೊಳ್ಳಲು ಮಾದರಿ ಮತಪತ್ರದೊಂದಿಗೆ ಮತದಾನ ಪ್ರಕ್ರಿಯೆ ಕುರಿತು ಬಿಜೆಪಿ ಶಾಸಕರಿಗೆ ತರಬೇತಿ ನೀಡಲಾಗಿದೆ. ಮತದಾನಕ್ಕೆ ತಂಡಗಳಲ್ಲಿ ತೆರಳಬೇಕು ಎನ್ನುವ ನಿರ್ಧಾರದೊಂದಿಗೆ ಮೂರು ಶಾಸಕರಂತೆ ತಂಡ ರಚಿಸಿ ಮತದಾನಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.
ತಲಾ ಮೂವರು ಶಾಸಕರ ಬ್ಯಾಚ್: ಗುರುವಾರ ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ 27ರಂದು ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡುವ ಜೊತೆಗೆ, ಹೊಸ ಶಾಸಕರಿಗೆ ಮತದಾನ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲಾಗಿದೆ. ಯಾರೊಬ್ಬರ ಮತವೂ ಅಸಿಂಧು ಆಗದಂತೆ ಎಚ್ಚರ ವಹಿಸುವಂತೆ ತಿಳಿಸಲಾಗಿದೆ. ಮತ ಹಾಕಲು ತಲಾ ಮೂರು ಶಾಸಕರ ಬ್ಯಾಚ್ ಸಿದ್ಧಪಡಿಸಿದ್ದು, ಒಂದು ಬ್ಯಾಚ್ಗೆ ಒಬ್ಬ ಹಿರಿಯ ಶಾಸಕ ಲೀಡರ್ ಆಗಿದ್ದಾರೆ. ಮಾದರಿ ಬ್ಯಾಲೆಟ್ ಮೂಲಕ ಶಾಸಕರಿಗೆ ಸಭೆಯಲ್ಲಿ ಮತದಾನ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿ, ಯಾರು ಯಾರಿಗೆ ಮತ ಹಾಕಬೇಕು ಎನ್ನುವ ಕುರಿತು ವಿವರಣೆ ನೀಡಲಾಗಿದೆ.
ನಂತರ ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯುವ ಫೆಬ್ರವರಿ 27ರಂದು ಬೆಳಗ್ಗೆ 8.30ಕ್ಕೆ ವಿಧಾನಸೌಧದಲ್ಲಿ ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿ ಉಪಹಾರಕ್ಕೆ ಹಾಜರಾಗುವಂತೆ ಶಾಸಕರಿಗೆ ಸಭೆಯಲ್ಲಿ ಸೂಚಿಸಲಾಗಿದೆ. ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಮಾತನಾಡಿದ ಬಿಜೆಪಿ ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್, ಪಕ್ಷ ನೀಡಿರುವ ಜವಾಬ್ದಾರಿ ಹಾಗೂ ಸೂಚನೆಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಸೂಚಿಸಿದರು.
ಚುನಾವಣೆ ಎದುರಿಸುವ ಬಗ್ಗೆ ಚರ್ಚೆ: ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ''ಶಾಸಕಾಂಗ ಪಕ್ಷದ ಸಭೆ ನಡೆಸಿದೆವು. ಪ್ರಮುಖವಾಗಿ ರಾಜ್ಯಸಭಾ ಚುನಾವಣೆಗೆ ಯಾವ ರೀತಿ ರಣತಂತ್ರ ಮಾಡಬೇಕು. ಮತದಾನ ಕುಲಗೆಡಬಾರದು ಎನ್ನುವ ಕುರಿತು ಚರ್ಚಿಸಲಾಯಿತು. ಪ್ರತಿ ಮತಗಳು ಮುಖ್ಯ ಅದಕ್ಕಾಗಿ ಮಾಡೆಲ್ ಬ್ಯಾಲೆಟ್ ಪೇಪರ್ ಮಾಡಲಾಗಿತ್ತು. ಪ್ರತಿಯೊಬ್ಬರು ಕರೆಕ್ಟ್ ಆಗಿ ಮತದಾನ ಮಾಡಿದ್ದಾರೆ. ನಮ್ಮ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಿದರು. ಮುಂದೆ ಹೇಗೆ ಚುನಾವಣೆ ಎದುರಿಸಬೇಕು ಅಂತ ಚರ್ಚೆಯಾಗಿದೆ'' ಎಂದು ತಿಳಿಸಿದರು.
ಕೆಲ ಶಾಸಕರ ಗೈರು ವಿಚಾರದ ಕುರಿತು ಮಾತನಾಡಿದ ಅಶೋಕ್, ''ವಿಧಾನಸಭೆಗೆ ಯಾರು ಆಗಮಿಸಿದ್ದರೋ ಅವರು ಮಾತ್ರ ಬಂದಿದ್ದಾರೆ. ಕೆಲವರು ಊರಿಗೆ ಹೋಗಿರುವುದರಿಂದ ಸಭೆಗೆ ಬರಲಾಗಿಲ್ಲ. ಮೂರು ಮೂರು ಜನರ ಬ್ಯಾಚ್ ಮಾಡಿದ್ದೇವೆ. ಅವರ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿಸುವ ಕ್ರಮ ನಡೆಯಲಿದೆ, ಎಲ್ಲವೂ ಸರಿಯಾಗಿ ನಡೆಯಲಿದೆ. ಯಾವುದೇ ಗೊಂದಲ ಇಲ್ಲ'' ಎಂದರು.
ಇದನ್ನೂ ಓದಿ: ಲೋಕಸಭೆ, ರಾಜ್ಯಸಭೆ ಚುನಾವಣೆಗೆ ಕಾರ್ಯತಂತ್ರ : ಅಮಿತ್ ಶಾ- ಹೆಚ್ ಡಿ ಕುಮಾರಸ್ವಾಮಿ ಚರ್ಚೆ