ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ದೋಸ್ತಿಗಳು ಮೈಸೂರಿಗೆ ಪಾದಯಾತ್ರೆ ಆರಂಭಿಸಿದ್ದು, ಮುಂದಿನ ಸಿಎಂ ಕುಮಾರಣ್ಣ ಎಂಬ ಹಾಡುಗಳು ಸದ್ದು ಮಾಡಿದವು. ಕೆಂಗೇರಿಯಿಂದ ಆರಂಭಗೊಂಡ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮಧ್ಯಾಹ್ನದ ಭೋಜನ ವಿರಾಮದ ವೇಳೆ ವಂಡರ್ ಲಾ ಗೇಟ್ ತಲುಪಿತು.
ದಾರಿಯುದ್ದಕ್ಕೂ ಘೋಷಣೆಗಳು, ರಾಜ್ಯ ಸರ್ಕಾರದ ವಿರುದ್ಧ ಹಾಡುಗಳ ಮೂಲಕ ಪಾದಯಾತ್ರೆ ಸಾಗಿತು. ಆದರೆ, ಜೆಡಿಎಸ್ ನಾಯಕರು ಈ ಮಧ್ಯೆ ತಮ್ಮ ಪಕ್ಷದ ವರಿಷ್ಠ ಪರ ಘೋಷಣೆ ಜೊತೆಗೆ ಹಾಡುಗಳನ್ನು ಹಾಡಿ ಪಾದಯಾತ್ರೆ ನಡೆಸಿದರು. ಮುಂದಿನ ಸಿಎಂ ಕುಮಾರಣ್ಣ ಎಂಬ ಹಾಡಿನ ಮೂಲಕ ಗಮನ ಸೆಳೆದರು.
ಕೆಂಗೇರಿ ನೈಸ್ ಜಂಕ್ಷನ್ ಬಳಿ ಉದ್ಘಾಟನಾ ಸಮಾವೇಶದ ಬಳಿಕ ಪಾದಯಾತ್ರೆ ಆರಂಭವಾಗುತ್ತಿದ್ದಂತೆ, ಮಳೆಯೂ ಶುರುವಾಯಿತು. ಹಾಗಿದ್ದರೂ, ಮಳೆಯಲ್ಲೇ ಪಾದಯಾತ್ರೆ ಸಾಗಿತು. ಎರಡೂ ಪಕ್ಷಗಳ ನಾಯಕರು ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳ ಮೂಲಕ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ.
ಬಿಎಸ್ವೈ ಕಾಲ್ನಡಿಗೆ, ಹೆಜ್ಜೆ ಹಾಕದ ಹೆಚ್ಡಿಕೆ: ಪಾದಯಾತ್ರೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೂ ಕೆಲಕಾಲ ಹೆಜ್ಜೆ ಹಾಕಿದರು. ಆ ಮೂಲಕ ಈ ಇಳಿವಯಸ್ಸಿನಲ್ಲೂ ತಮ್ಮ ಉಪಸ್ಥಿತಿಯನ್ನು ತೋರಿಸಿದರು. ಇತ್ತ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತ್ರ ಪಾದಯಾತ್ರೆಯಲ್ಲಿ ಕಾಲ್ನಡಿಗೆ ಮಾಡಿಲ್ಲ. ಅನಾರೋಗ್ಯದ ಕಾರಣ ಅವರು ಹೆಜ್ಜೆ ಹಾಕಿಲ್ಲ. ಬದಲಿಗೆ ಕಾರಿನಲ್ಲೇ ಕೂತು ಪಾದಯಾತ್ರೆಯಲ್ಲಿ ಸಾಗಿದರು.
ನಾವು ಉರಿಗೌಡ ನಂಜೇಗೌಡ: ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಅಶ್ವತ್ಥ ನಾರಾಯಣ್ ಒಟ್ಟಿಗೆ ಹೆಜ್ಜೆ ಹಾಕಿದರು. ಈ ವೇಳೆ ನಾವು ಉರಿಗೌಡ, ನಂಜೇಗೌಡ ಎಂದು ಹೇಳುತ್ತಾ ಹೆಜ್ಜೆ ಹಾಕಿರುವುದು ಗಮನ ಸೆಳೆಯಿತು. ಇದೇ ವೇಳೆ ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ರನ್ನಿಂಗ್ ಮೂಲಕವೂ ಗಮನ ಸೆಳೆದರು.
ನಿಖಿಲ್ ಪ್ರತ್ಯೇಕ ನಡಿಗೆ: ಆರಂಭದಲ್ಲಿ ಬಿಜೆಪಿ ನಾಯಕರ ಜೊತೆಗೆ ಹೆಜ್ಜೆ ಹಾಕಿದ ನಿಖಿಲ್ ಕುಮಾರಸ್ವಾಮಿ, ಬಳಿಕ ಪ್ರತ್ಯೇಕವಾಗಿ ಹೆಜ್ಜೆ ಹಾಕಿದರು. ಜೆಡಿಎಸ್ ಶಾಸಕರು ನಿಖಿಲ್ಗೆ ಸಾಥ್ ನೀಡಿದರು.
ಟ್ರಾಫಿಕ್ ಕಿರಿ ಕಿರಿ: ಪಾದಯಾತ್ರೆ ಬೆಂಗಳೂರು ಮೈಸೂರು ರಸ್ತೆಯ ಸರ್ವಿಸ್ ಮಾರ್ಗವಾಗಿ ಸಾಗುತ್ತಿದ್ದರೆ, ಅತ್ತ ವಾಹನ ಓಡಾಟಕ್ಕೆ ಅಡಚಣೆ ಉಂಟಾಯಿತು. ಕೆಂಗೇರಿ ನೈಸ್ ಜಂಕ್ಷನ್ ಬಳಿ ಕಿಲೋಮೀಟರ್ಗಟ್ಟಲೆ ವಾಹನಗಳು ನಿಂತಲ್ಲೇ ನಿಲ್ಲುವಂತಾಯಿತು. ಪಾದಯಾತ್ರೆ ಸಾಗುತ್ತಿರುವ ಸರ್ವಿಸ್ ರಸ್ತೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿದೆ. ಸಂಚಾರಿ ಪೊಲೀಸರು ಟ್ರಾಫಿಕ್ ನಿರ್ವಹಣೆ ಮಾಡಲು ಹರಸಾಹಸ ಪಡುವಂತಾಗಿದೆ.
ಬ್ಯಾನರ್ ಭರಾಟೆ: ಪಾದಯಾತ್ರೆ ಮಾರ್ಗದಲ್ಲಿ ಬ್ಯಾನರ್, ಬಂಟಿಂಗ್ಸ್ಗಳ ಭರಾಟೆ ಜೋರಾಗಿದೆ. ತಮ್ಮ ನಾಯಕರ ಪರವಾಗಿ ಬೆಂಬಲಿಗರು ರಸ್ತೆ ಪಕ್ಕದಲ್ಲಿ ದೊಡ್ಡ ದೊಡ್ಡ ಬಂಟಿಂಗ್ಸ್ ಅಳವಡಿಸಿ ಪಾದಯಾತ್ರೆಗೆ ಶುಭಾಶಯ ಕೋರಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಪೋಸ್ಟರ್, ಬಂಟಿಂಗ್ಸ್ಗಳು ಹೆಚ್ಚಾಗಿ ರಾರಾಜಿಸುತ್ತಿವೆ. ಇತ್ತ ಕುಮಾರಸ್ವಾಮಿ ಬ್ಯಾನರ್ಗಳನ್ನೂ ಹಲವೆಡೆ ಹಾಕಲಾಗಿದೆ.