ಚಿಕ್ಕಮಗಳೂರು: ಕೊಟ್ಟಿಗೆಹಾರ ಸಮೀಪದಲ್ಲಿರುವ ಚಾರ್ಮಾಡಿ ಘಾಟ್ ರಸ್ತೆಯ 10ನೇ ತಿರುವಿನಲ್ಲಿ ಶನಿವಾರ ರಾತ್ರಿ ಗುಡ್ಡ ಕುಸಿಯಿತು. ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮತ್ತೆ ಗಾಳಿಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಮರಗಳು ರಸ್ತೆಗಳ ಮೇಲೆ ಬೀಳುತ್ತಿವೆ. ಹೀಗಾಗಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್ ಮೂಲಕ ಹಾದು ಹೋಗುತ್ತದೆ. ಶನಿವಾರ ಮಳೆ ಹೆಚ್ಚಿದ್ದರಿಂದ ಮಣ್ಣಿನೊಂದಿಗೆ ಕಲ್ಲುಬಂಡೆ, ಮರದ ಕೊಂಬೆ ಸಮೇತ ಮರಗಳು ರಸ್ತೆಯ ಮೇಲೆ ಬಿದ್ದಿದೆ. ಹೀಗಾಗಿ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೊನೆಗೆ ಸ್ಥಳೀಯರು ಹಾಗು ಪೊಲೀಸರು ಜೆಸಿಬಿ ಮೂಲಕ ವಾಹನಗಳು ಸಾಗುವಷ್ಟು ರಸ್ತೆಯನ್ನು ತೆರವುಗೊಳಿಸಿದರು. ಬಳಿಕ ಒಂದೊಂದಾಗಿ ವಾಹನಗಳು ಸಂಚರಿಸಿದವು. ಘಾಟ್‌ಗೆ ಯಾವುದೇ ವಾಹನಗಳು ತೆರಳದಂತೆ ಪೊಲೀಸರು ಸೂಚನೆ ನೀಡಿದ್ದು, ಕೊಟ್ಟಿಗೆಹಾರದಿಂದ ವಾಹನಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ.
ಮೂಡಿಗೆರೆ, ಕಳಸ, ಕೊಪ್ಪ, ಜಯಪುರ, ಶೃಂಗೇರಿ, ಎನ್.ಆರ್.ಪುರ ಹಾಗು ಬಾಳೆಹೊನ್ನೂರು ಪ್ರದೇಶಗಳಲ್ಲಿ ಮಳೆ ತಗ್ಗಿದರೂ ಗಾಳಿ ಬಲವಾಗಿ ಬೀಸುತ್ತಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಸಂಪಿ ಕಟ್ಟೆ-ಬಾಳೆಹೊಳೆ ರಸ್ತೆಯಲ್ಲಿ ಬೃಹತ್ ಮರ ಬಿದ್ದು 2 ಗಂಟೆ ರಸ್ತೆ ಸಂಚಾರ ಬಂದ್ ಆಗಿತ್ತು. ಮೆಸ್ಕಾಂ, ಅರಣ್ಯ ಸಿಬ್ಬಂದಿ, ಸ್ಥಳೀಯರು ಮರ ತೆರವು ಮಾಡಿದರು.
ಇದನ್ನೂ ಓದಿ: ಉಡುಪಿ: ಭಾರಿ ಗಾಳಿ - ಮಳೆಯಿಂದ ಅವಾಂತರ, ಒಂದೇ ದಿನ ₹40 ಲಕ್ಷದಷ್ಟು ಆಸ್ತಿ - ಪಾಸ್ತಿಗೆ ಹಾನಿ - heavy rain in udupi