ಮೈಸೂರು: ನಾಡಿನ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದ್ದು, ಶನಿವಾರ ಬೆಳ್ಳಂಬೆಳಿಗ್ಗೆ ನಡೆದ ಪಾರಂಪರಿಕ ಟಾಂಗಾ ಸವಾರಿ ಪ್ರವಾಸಿಗರ ಕಣ್ಮನ ಸೆಳೆಯಿತು.
ಸಾಂಪ್ರದಾಯಿಕ ಉಡುಗೆ ತೊಟ್ಟ ಹಿರಿಯ ಹಾಗೂ ಕಿರಿಯ ಸುಮಾರು 50 ದಂಪತಿಗಳು 25 ಪಾರಂಪರಿಕ ಟಾಂಗಾಗಳಲ್ಲಿ ನಗರದ ವಿವಿಧ ಬೀದಿಯಲ್ಲಿ ಸವಾರಿ ಮಾಡಿ ಗಮನ ಸೆಳೆದರು. ಟಾನ್ ಹಾಲ್ ಬಳಿಯಿಂದ ಹೊರಟ ಟಾಂಗಾ ಸವಾರಿಯು ನಗರದ ಐತಿಹಾಸಿಕ ರಸ್ತೆಗಳಲ್ಲಿ ಸಾಗಿತು.
ಪಾರಂಪರಿಕ ಉಡುಗೆಯಲ್ಲಿ ಗಮನ ಸೆಳೆದ ದಂಪತಿಗಳು: ಮೈಸೂರು, ಶಿವಮೊಗ್ಗ, ಹಾಸನ, ಬೆಂಗಳೂರು ಹಾಗೂ ಇನ್ನಿತರೆ ಜಿಲ್ಲೆಗಳಿಂದ ನೋಂದಾಯಿತ 50 ದಂಪತಿಗಳು ಆಯಾ ಜಿಲ್ಲೆಗಳ ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಕೊಡಗು ಹಾಗೂ ಮೈಸೂರಿನ ಪಾರಂಪರಿಕ ಉಡುಗೆ ತೊಟ್ಟ ದಂಪತಿಗಳು ನೋಡುಗರ ಗಮನ ಸಳೆದರು.
ಕಿರಿಯ ಮತ್ತು ಹಿರಿಯ ವಯಸ್ಸಿನ ಜೋಡಿಗಳು ಟಾಂಗಾ ಸವಾರಿಯಲ್ಲಿ ಭಾಗವಹಿಸಿದ್ದು ಪ್ರಮುಖವಾಗಿತ್ತು. ಸವಾರಿ ಆರಂಭಕ್ಕೂ ಮುನ್ನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ಜೋಡಿಗಳಿಗೆ ಬಾಗಿನ ಕೊಟ್ಟು ಸ್ವಾಗತಿಸಿತು. ಬಳಿಕ ದಂಪತಿಗಳಿಗೆ ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ಸಹ ನೀಡಿದರು.
ವಿವಿಧೆಡೆ ಟಾಂಗಾ ಸವಾರಿ: ಟಾನ್ ಹಾಲ್ ಬಳಿಯ ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾದ ಸವಾರಿಯು ದೊಡ್ಡ ಗಡಿಯಾರ ಗೋಪುರ, 10ನೇ ಚಾಮರಾಜೇಂದ್ರ ವೃತ್ತ, ಅಂಬಾ ವಿಲಾಸ ಅರಮನೆ, ನಾಲ್ಮಡಿ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್‌ಡೌನ್ ಕಟ್ಟಡ, ಜಗನ್ ಮೋಹನ ಅರಮನೆ, ಪರಕಾಲ ಮಠ, ಶೇಷಾದ್ರಿ ಹೌಸ್-ವಾಣಿಜ್ಯ ತೆರಿಗೆ ಕಚೇರಿ, ಹಳೇ ಜಿಲ್ಲಾಧಿಕಾರಿಗಳ ಕಚೇರಿ, ಕ್ರಾಫರ್ಡ್ ಹಾಲ್, ಹೋಟೆಲ್ ಮೆಟ್ರೋಪೋಲ್, ಮೈಸೂರು ರೈಲ್ವೆ ಜಂಕ್ಷನ್, ಕೃಷ್ಣ ರಾಜೇಂದ್ರ ಆಸ್ಪತ್ರೆ ವೃತ್ತ, ಮೈಸೂರು ಮೆಡಿಕಲ್ ಕಾಲೇಜು, ಆಯುರ್ವೇದಿಕ್ ಆಸ್ಪತ್ರೆ, ಕಾವೇರಿ ಎಂಪೋರಿಯಮ್, ಗಾಂಧಿ ವೃತ್ತದ ಮೂಲಕ ಮತ್ತೆ ರಂಗಾಚಾರ್ಲು ಪುರಭವನ (ಟೌನ್‌ಹಾಲ್) ಆವರಣದಲ್ಲಿ ಮುಕ್ತಾಯವಾಯಿತು.
ಇದನ್ನೂ ಓದಿ: ಬೆಂಗಳೂರಲ್ಲಿ ಕಣ್ಮನ ಸೆಳೆಯುತ್ತಿದೆ ವಿಶೇಷ ದಸರಾ ಗೊಂಬೆಗಳ ಪ್ರದರ್ಶನ - Dasara Dolls