ಮಂಗಳೂರು: ಮಂಗಳೂರಿನ ಎನ್ಎಂಪಿಎಗೆ ಈ ಋತುವಿನ ಕೊನೆಯ ಪ್ರವಾಸಿ ಹಡಗು RIVIERA ಮಂಗಳವಾರ ಬೆಳಗ್ಗೆ ಆಗಮಿಸಿ ಸಂಜೆಯ ವೇಳೆಗೆ ತೆರಳಿದೆ. ಇದು ಪ್ರಸ್ತುತ ಋತುವಿನ 9ನೇ ಮತ್ತು ಕೊನೆಯ ಕ್ರೂಸ್ ಹಡಗು. ಬೆಳಿಗ್ಗೆ 8.30ಕ್ಕೆ ಬಂದರಿಗೆ ಆಗಮಿಸಿದ ಮಾರ್ಷಲ್ ಐಲ್ಯಾಂಡ್ ಫ್ಲ್ಯಾಗ್ ಹೊಂದಿದ್ದ ಹಡಗು 1,141 ಪ್ರಯಾಣಿಕರು ಮತ್ತು 752 ಸಿಬ್ಬಂದಿಯನ್ನು ಕರೆ ತಂದಿತ್ತು.
![RIVIERA ಕ್ರೂಸ್](https://etvbharatimages.akamaized.net/etvbharat/prod-images/08-05-2024/kn-mng-04-cruise-photo-7202146_08052024094606_0805f_1715141766_223.jpg)
ಸಾಂಕ್ರಾಮಿಕ ರೋಗದ ನಂತರ ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರೊಂದಿಗೆ ಈ ಹಡಗು ಬಂದಿದೆ. ಕೊಚ್ಚಿನ್ ಬಂದರಿನಿಂದ ಮಂಗಳೂರಿಗೆ ಬಂದಿದ್ದು ನಂತರ ಮೊರ್ಮುಗೋವಾ ಬಂದರಿಗೆ ತೆರಳಿದೆ.
ಇದರಲ್ಲಿದ್ದ ಪ್ರಯಾಣಿಕರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಮಂಗಳೂರಿನ ವಿವಿಧ ಪ್ರವಾಸಿ ತಾಣಗಳಿಗೆ ಕರೆದೊಯ್ದು ಕಡಲೂರಿನ ಸೊಬಗನ್ನು ತೋರಿಸಲಾಯಿತು.
![RIVIERA ಕ್ರೂಸ್](https://etvbharatimages.akamaized.net/etvbharat/prod-images/08-05-2024/kn-mng-04-cruise-photo-7202146_08052024094606_0805f_1715141766_818.jpg)
ಇದಕ್ಕೂ ಮುನ್ನ ಎರಡು ದಿನಗಳ ಹಿಂದೆ, ಮೇ.6ರಂದು ಈ ಋತುವಿನ 8ನೇ ವಿಲಾಸಿ ಪ್ರವಾಸಿ ಕ್ರೂಸ್ ಹಡಗು ಆಗಮಿಸಿತ್ತು. MS INSIGNIA ಎಂಬ ಹೆಸರಿನ ನಾರ್ವೇಜಿಯನ್ ಕ್ರೂಸ್‌ನಲ್ಲಿ 509 ಪ್ರಯಾಣಿಕರು ಮತ್ತು 407 ಸಿಬ್ಬಂದಿಗಳಿದ್ದರು.
![RIVIERA ಕ್ರೂಸ್](https://etvbharatimages.akamaized.net/etvbharat/prod-images/08-05-2024/kn-mng-04-cruise-photo-7202146_08052024094606_0805f_1715141766_548.jpg)
ಹಡಗಿನಿಂದಿಳಿದ ಪ್ರಯಾಣಿಕರಿಗೆ ನವ ಮಂಗಳೂರು ಬಂದರು ಪ್ರಾಧಿಕಾರದ ವತಿಯಿಂದ ಸಾಂಪ್ರದಾಯಿಕ ಸ್ವಾಗತ ನೀಡಲಾಗಿತ್ತು. ಬಳಿಕ ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣಗಳು, ದೇವಾಲಯ, ಮಾರುಕಟ್ಟೆ ಮತ್ತು ಅಂಗಡಿಗಳಿಗೆ ತೆರಳಲು ಅನುಕೂಲವಾಗುವಂತೆ ಬಸ್ ಮತ್ತು ಟ್ಯಾಕ್ಸಿ ವ್ಯವಸ್ಥೆ ಮಾಡಲಾಗಿತ್ತು.
![RIVIERA ಕ್ರೂಸ್](https://etvbharatimages.akamaized.net/etvbharat/prod-images/08-05-2024/kn-mng-04-cruise-photo-7202146_08052024094606_0805f_1715141766_339.jpg)
ಇದನ್ನೂ ಓದಿ: 7 ವರ್ಷಗಳ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ ಹೈಸ್ಪೀಡ್ ಪ್ರವಾಸಿ ಪರೇಲಿ ಹಡಗು - High speed ship