ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಊಟದ ನಂತರ ಕೈ ತೊಳೆಯಲು ಹೋದ ಮಗಳು ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದ್ದು, ಮಗಳ ರಕ್ಷಣೆಗೆ ಹೋದ ಅಪ್ಪ ಅಮ್ಮ ಇಬ್ಬರು ಮಗಳೊಂದಿಗೆ ನೀರುಪಾಲಾಗಿರುವ ಘಟನೆ ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಮರಿಯಪ್ಪ (70), ಮುನಿಯಮ್ಮ (60) ಮತ್ತು ಭಾರತಿ (40) ಸಾವನ್ನಪ್ಪಿದ್ದಾರೆ. ವಿಶೇಷಚೇತನಳಾಗಿದ್ದ ಮಗಳು ಕೈ ತೊಳೆಯಲು ಹೋದಾಗ ನೀರಿಗೆ ಬಿದ್ದಿರುವ ಶಂಕೆ ಇದೆ. ಈ ವೇಳೆ ಮಗಳ ರಕ್ಷಣೆಗೆ ಧಾವಿಸಿದ ಆಕೆಯ ಹೆತ್ತವರು ಸಹ ನೀರುಪಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ನೀರಿನಿಂದ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಡಲೆ ರಾಶಿ ವೇಳೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು
ಬೆಳಗಾವಿ: ಕಡಲೆ ರಾಶಿ ಮಾಡುವಾಗ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮಹಾದೇವಿ ಮಲ್ಲಪ್ಪ ಗಣಾಚಾರಿ(45) ಮೃತ ದುರ್ದೈವಿ. ತಮ್ಮ ಹೊಲದಲ್ಲಿ ಕಡಲೆ ರಾಶಿ ಮಾಡುವ ವೇಳೆ ಈ ದುರಂತ ಸಂಭವಿಸಿದೆ. ಯಂತ್ರದೊಳಗೆ ಮಹಿಳೆ ಸಿಲುಕಿ ಮಹಿಳೆ ಒದ್ದಾಡಿದ್ದು, ಕುಟುಂಬಸ್ಥರು ತಕ್ಷಣವೇ ಯಂತ್ರವನ್ನು ಬಂದ್ ಮಾಡಿ, ಮಹಿಳೆಯನ್ನು ಹೊರಗೆ ತೆಗೆದಿದ್ದಾರೆ.
ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆರಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತ ಮಹಿಳೆಗೆ ಪತಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಧಾರವಾಡ: ತಾಯಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಗ